ಕ್ರೀಡೆ

ಸ್ಕಾಟ್ಲೆಂಡ್​ ಎದುರು ಟಿ20 ಸರಣಿ ಗೆದ್ದ ಆಸ್ಟ್ರೆಲಿಯಾ ತಂಡಕ್ಕೆ ಸಿಕ್ಕಿದ್ದು ಐಸ್​ಕ್ರೀಮ್​ ಕಪ್​!

ನವದೆಹಲಿ: ಆಸ್ಟ್ರೆಲಿಯಾ ತಂಡ ಇತ್ತೀಚೆಗೆ ಸ್ಕಾಟ್ಲೆಂಡ್​ನಲ್ಲಿ ನಡೆದ ಟಿ20 ಸರಣಿಯಲ್ಲಿ 3&0 ಅಂತರದಿಂದ ಕ್ಲೀನ್​ಸ್ವೀಪ್​ ಸಾಧಿಸಿತು. ಆದರೆ ಸರಣಿಯ ಕೊನೇ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಸ್ಟ್ರೆಲಿಯಾ ತಂಡಕ್ಕೆ ಸಿಕ್ಕಿದ್ದು "ಐಸ್​ಕ್ರೀಮ್​ ಕಪ್​'ನಂತಿದ್ದ ಟ್ರೋಫಿ! ಹೌದು, ಅಷ್ಟು ಸಣ್ಣ ಟ್ರೋಫಿಯನ್ನು ಕಂಡು, ಅದನ್ನು ಸ್ವೀಕರಿಸಲು ಬಂದ ಆಸ್ಟ್ರೆಲಿಯಾ ತಂಡದ ನಾಯಕ ಮಿಚೆಲ್​ ಮಾರ್ಷ್​ ಕೂಡ ಕಕ್ಕಾಬಿಕ್ಕಿಯಾಗಿದ್ದರು!

ಆಸ್ಟ್ರೆಲಿಯಾ ತಂಡ ಮಿನಿ ಬೌಲ್​ನಂತಿರುವ ಆ ಟ್ರೋಫಿಯೊಂದಿಗೆ ಸಂಭ್ರಮಿಸಿರುವ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗುತ್ತಿದ್ದು, ಆ ಟ್ರೋಫಿಯನ್ನು ನೆಟ್ಟಿಗರು, ಐಸ್​ಕ್ರೀಮ್​ ಕಪ್​, ಟೀ ಕಪ್​, ಕಡಾಯಿ ಎಂದೆಲ್ಲ ಕರೆದು ಟ್ರೋಲ್​ ಮಾಡುತ್ತಿದ್ದಾರೆ.

ನಿಜಕ್ಕಾದರೆ ಅದು ಸ್ಕಾಟ್ಲೆಂಡ್​ ದೇಶದಲ್ಲಿ ಸಾಂಪ್ರದಾಯಿಕವಾಗಿ ಅತ್ಯಂತ ಮಹತ್ವದ್ದಾಗಿರುವ "ಕ್ವಿಚ್​' ಆಗಿದೆ. ಎರಡೂ ಕಡೆ ಹಿಡಿಗಳನ್ನು ಹೊಂದಿರುವ ಈ ಕ್ವಿಚ್​ ಅನ್ನು ಸ್ಕಾಟ್ಲೆಂಡ್​ ಜನರು ವಿಸ್ಕಿ ಅಥವಾ ಇತರ ಪಾನೀಯಗಳನ್ನು ಕುಡಿಯಲು ಬಳಸುತ್ತಾರೆ. ಅದನ್ನೇ ಟ್ರೋಫಿಯ ರೀತಿಯಲ್ಲಿ ವಿತರಿಸುವುದು ಸ್ಕಾಟ್ಲೆಂಡ್​ ಕ್ರಿಕೆಟ್​ ಸಂಸ್ಥೆಗೆ ಪ್ರತಿಷ್ಠೆಯೇ ಆಗಿತ್ತು. ಆದರೆ ಇತರ ದೇಶದ ಕ್ರಿಕೆಟ್​ ಪ್ರೇಮಿಗಳ ಅದರ ಮಹತ್ವ ಅರಿಯದ ಕಾರಣ ಟ್ರೋಲ್​ಗಳಿಗೆ ಒಳಗಾಗುವಂತಾಯಿತು.