ಕ್ರೀಡೆ

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಐವರು ಹೊಸಬರಿಗೆ ಸ್ಥಾನ

ಮೆಲ್ಬೋರ್ನ್: ಪ್ರವಾಸಿ ಭಾರತ ತಂಡದ ವಿರುದ್ಧ ಡಿಸೆಂಬರ್ 17ರಂದು ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಸರಣಿಗೆ 17 ಆಟಗಾರರ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ವಿಲ್ ಪುಕೊವ್‌ಸ್ಕಿ, ಕ್ಯಾಮರೂನ್ ಗ್ರೀನ್ ಸಹಿತ ಒಟ್ಟು ಐವರು ಹೊಸ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಟಿಮ್ ಪೇನ್ ಸಾರಥ್ಯದ ತಂಡದಲ್ಲಿ ವೇಗಿ ಸೀನ್ ಅಬೋಟ್, ಲೆಗ್ ಸ್ಪಿನ್ನರ್ ಮಿಚೆಲ್ ಸ್ವೀಪ್‌ಸನ್ ಮತ್ತು ಆಲ್ರೌಂಡರ್ ಮಿಚೆಲ್ ನೆಸರ್ ಇತರ ಮೂವರು ಹೊಸ ಆಟಗಾರರಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ತೋರಿ ಮಿಂಚಿರುವ ಈ ಐವರು ಆಟಗಾರರು ಆಸ್ಟ್ರೇಲಿಯಾ ಟೆಸ್ಟ್ ತಂಡದ ಬ್ಯಾಗಿ ಗ್ರೀನ್ ಕ್ಯಾಪ್ ಇನ್ನಷ್ಟೇ ತೊಡಬೇಕಾಗಿದೆ. ಆದರೆ ಇತರ ಕ್ರಿಕೆಟ್ ಪ್ರಕಾರದಲ್ಲಿ ಈಗಾಗಲೆ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಫಿಲ್ ಹ್ಯೂಸ್ 2014ರಲ್ಲಿ ಸೀನ್ ಅಬೋಟ್ ಅವರ ಬೌನ್ಸರ್ ತಲೆಗೆ ಬಡಿದ ಕಾರಣದಿಂದಾಗಿ ಪ್ರಾಣ ಕಳೆದುಕೊಂಡಿದ್ದರು. 22 ವರ್ಷದ ಪುಕೊವ್‌ಸ್ಕಿ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಸತತ 2 ದ್ವಿಶತಕ ಸಿಡಿಸಿ ಮಿಂಚಿದ್ದರು. ಅವರು ಡೇವಿಡ್ ವಾರ್ನರ್ ಜತೆಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.

2018-19ರ ಕಳೆದ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡಕ್ಕೆ ಶರಣಾಗಿದ್ದ ಆಸೀಸ್ ತಂಡ ಈ ಬಾರಿ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ. ವೇಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಭಾರತ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಲು 19 ಸದಸ್ಯರ ಆಸ್ಟ್ರೇಲಿಯಾ ಎ ತಂಡವನ್ನು ಆರಿಸಲಾಗಿದ್ದು, ಇದರಲ್ಲಿ ಟೆಸ್ಟ್ ತಂಡದ 9 ಆಟಗಾರರು ಸ್ಥಾನ ಪಡೆದಿದ್ದಾರೆ.

ಆಸೀಸ್ ಟೆಸ್ಟ್ ತಂಡ: ಟಿಮ್ ಪೇನ್ (ನಾಯಕ), ಸೀನ್ ಅಬೋಟ್, ಜೋ ಬರ್ನ್ಸ್, ಪ್ಯಾಟ್ ಕಮ್ಮಿನ್ಸ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಸನ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ನಾಥನ್ ಲ್ಯಾನ್, ಮಿಚೆಲ್ ನೆಸರ್, ಜೇಮ್ಸ್ ಪ್ಯಾಟಿನ್‌ಸನ್, ವಿಲ್ ಪುಕೊವ್‌ಸ್ಕಿ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೀಪ್‌ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.