ಬೆಂಗಳೂರು: ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಹಬ್ಬ ಶುರುವಾಗಿ ಎರಡು ವಾರಗಳು ಕಳೆದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಲಿ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಟೂರ್ನಿಯಲ್ಲಿ ಈಗಾಗಲೆ ಆತಿಥೇಯ ಭಾರತ ತಂಡದ ಎದುರು ಶರಣಾಗಿರುವ ತಂಡಗಳಾದ 5 ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ಮತ್ತು ಪಾಕಿಸ್ತಾನ ತಂಡಗಳು ಶುಕ್ರವಾರ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಉಳಿಸಲು ಸಜ್ಜಾಗಿವೆ.
ಆರಂಭಿಕ 2 ಪಂದ್ಯಗಳಲ್ಲಿ ಭಾರತ, ದಣ ಆಫ್ರಿಕಾ ವಿರುದ್ಧ ಸೋತಿದ್ದ ಆಸೀಸ್, ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವಿನ ಹಳಿ ಏರಿದೆ. ಆದರೆ ಬ್ಯಾಟಿಂಗ್ ವಿಭಾಗದ ವೈಲ್ಯ ಪ್ಯಾಟ್ ಕಮ್ಮಿನ್ಸ್ ಬಳಗಕ್ಕೆ ಹಿನ್ನಡೆಯಾಗಿದೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಆಡಂ ಜಂಪಾಗೆ ಸಮರ್ಥ ಬೆಂಬಲ ಒದಗಿಸಲು ಮ್ಯಾಕ್ಸ್ವೆಲ್ ಒಬ್ಬರೇ ಶ್ರಮಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಉಪನಾಯಕ ಸ್ಟೀವನ್ ಸ್ಮಿತ್ ವೈಫಲ್ಯ ಹಿನ್ನಡೆಯಾಗಿದೆ. ಚಿನ್ನಸ್ವಾಮಿಯ ಬ್ಯಾಟಿಂಗ್ ಸ್ನೇಹಿ ಪಿಚ್ ಆಸೀಸ್ ಬ್ಯಾಟರ್ಗಳಿಗೆ ಫಾರ್ಮ್ ಕಂಡುಕೊಳ್ಳಲು ಸೂಕ್ತ ವೇದಿಕೆ ಎನಿಸಿದೆ.
ಮತ್ತೊಂದೆಡೆ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಪಾಕ್, ಕಳೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಹೈ&ವೋಲ್ಟೇಜ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಮಾನಸಿಕವಾಗಿಯೂ ಕುಗ್ಗಿದೆ. ಲಂಕಾ ಎದುರು ದಾಖಲೆಯ 344 ರನ್ ಬೆನ್ನಟ್ಟಿ ಗೆದ್ದಿದ್ದ ಪಾಕ್, ಭಾರತದ ಬಿಗಿ ದಾಳಿ ಎದುರು ನಾಟಕೀಯ ಕುಸಿತ ಕಂಡಿತ್ತು. ಹೀಗಾಗಿ ಆಸೀಸ್ ವೇಗಿಗಳೂ ಪಾಕ್ಗೆ ಸವಾಲೆನಿಸಬಹುದು. ಶಹೀನ್ ಷಾ ಅಫ್ರಿದಿ ಸಹಿತ ಪಾಕ್ ವೇಗಿಗಳೂ ಟೂರ್ನಿಯಲ್ಲಿ ತಮ್ಮ ವರ್ಚಸ್ಸಿಗೆ ತಕ್ಕ ಬೌಲಿಂಗ್ ದಾಳಿ ಪ್ರದರ್ಶಿಸಲು ವಿಫಲರಾಗಿದ್ದಾರೆ. ಉಪನಾಯಕ ಹಾಗೂ ಸ್ಪಿನ್ನರ್ ಶಾದಾಬ್ ಖಾನ್ ಫಾರ್ಮ್ನಲ್ಲಿಲ್ಲದಿರುವ ಕಾರಣ, ಲೆಗ್ ಸ್ಪಿನ್ನರ್ ಉಸ್ಮಾನ್ ಮಿರ್ಗೆ ಅವಕಾಶದ ನಿರೀಕ್ಷೆ ಇದೆ.
ಫಖರ್, ಸಲ್ಮಾನ್ ಅಲಭ್ಯ
ಗಾಯಾಳು ಆರಂಭಿಕ ಫಖರ್ ಜಮಾನ್ ಮತ್ತು ಜ್ವರದಿಂದ ಬಳಲುತ್ತಿರುವ ಆಲ್ರೌಂಡರ್ ಸಲ್ಮಾನ್ ಅಲಿ ಅಘಾ ಆಸೀಸ್ ವಿರುದ್ಧದ ಪಂದ್ಯಕ್ಕೆ ಪಾಕ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಪಾಕ್ ಪಂದ್ಯಕ್ಕೆ 13 ಆಟಗಾರರಿಂದ 11ರ ಬಳಗವನ್ನು ಆರಿಸಬೇಕಿದೆ.
ಬೆಂಗಳೂರಿನ ವಿಶ್ವಕಪ್ ಪಂದ್ಯಗಳು
ದಿನಾಂಕ: ಪಂದ್ಯ (ಆರಂಭ)
ಅ.20:ಆಸ್ಟ್ರೆಲಿಯಾ-ಪಾಕಿಸ್ತಾನ (ಮಧ್ಯಾಹ್ನ 2.00)
ಅ. 26: ಇಂಗ್ಲೆಂಡ್-ಶ್ರೀಲಂಕಾ (ಮಧ್ಯಾಹ್ನ 2.00)
ನ. 4: ನ್ಯೂಜಿಲೆಂಡ್-ಪಾಕಿಸ್ತಾನ (ಬೆಳಗ್ಗೆ 10.30)
ನ. 9: ನ್ಯೂಜಿಲೆಂಡ್-ಶ್ರೀಲಂಕಾ (ಮಧ್ಯಾಹ್ನ 2.00)
ನ. 12: ಭಾರತ-ನೆದರ್ಲೆಂಡ್ (ಮಧ್ಯಾಹ್ನ 2.00)
*ಏಕದಿನ ಮುಖಾಮುಖಿ: 107
ಆಸೀಸ್: 69, ಪಾಕ್ 34, ಟೈ: 1, ರದ್ದು: 3
*ವಿಶ್ವಕಪ್ ಮುಖಾಮುಖಿ: 10
ಆಸ್ಟ್ರೆಲಿಯಾ: 6, ಪಾಕಿಸ್ತಾನ: 4
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್