ಕ್ರೀಡೆ

ಆಸ್ಟ್ರೇಲಿಯಾದ ಸರ್ಫಿಂಗ್ ಕ್ರೀಡಾಪಟು ಈಗ ನೀಲಿಚಿತ್ರ ತಾರೆ!

ಮೆಲ್ಬೋರ್ನ್: ಮಹಿಳಾ ಕ್ರೀಡಾಪಟುಗಳು ಆರ್ಥಿಕ ಸಂಕಷ್ಟವನ್ನು ನೀಗಿಸಿಕೊಳ್ಳಲು ನೀಲಿಚಿತ್ರ ಜಗತ್ತು ಪ್ರವೇಶಿಸುತ್ತಿರುವ ಆಘಾತಕಾರಿ ಬೆಳವಣಿಗೆಗೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಮೊದಲಿಗೆ ಮಾಜಿ ವಿ8 ಸೂಪರ್‌ಕಾರ್ ರೇಸರ್ ರಿನೀ ಗ್ರೇಸಿ ಕ್ರೀಡಾಜೀವನದ ಆರ್ಥಿಕ ಸಂಕಷ್ಟದಿಂದ ಬೇಸತ್ತು ನೀಲಿಚಿತ್ರ ಜಗತ್ತು ಪ್ರವೇಶಿಸಿದ್ದಲ್ಲದೆ ಅದರಲ್ಲಿ ಉತ್ತಮ ಸಂಪಾದನೆಯನ್ನೂ ಕಂಡಿದ್ದರು. ಇದೀಗ ಆಸ್ಟ್ರೇಲಿಯಾದ ವೃತ್ತಿಪರ ಸರ್ಫಿಂಗ್ ಕ್ರೀಡಾಪಟು ಎಲ್ಲಿ ಜೀನ್ ಕೋಫೀ ಕೂಡ ಇದೇ ಹಾದಿ ಹಿಡಿದಿದ್ದಾರೆ.

ಸರ್ಫಿಂಗ್ ತಾರೆ ಎಲ್ಲೀ ಜೀನ್ ಕೋಫಿ ಮತ್ತು ಆಕೆಯ ಸಹೋದರಿ ಹೋಲಿ ಡೇಜ್ ಕೋಫಿ ಅವರು ಈಗ ಎಕ್ಸ್ ರೇಟೆಡ್ ವೆಬ್‌ಸೈಟ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ತಮ್ಮ ನೀಲಿಚಿತ್ರಗಳನ್ನು ಈ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾರಂಭಿಸಿದ್ದಾರೆ.

ಕೋಫಿ ಸಿಸ್ಟರ್ಸ್‌ ಈ ಹಿಂದೆ 2012ರಿಂದ 2017ರವರೆಗೆ ವಿಶ್ವ ಸರ್ ಲೀಗ್‌ನ ಅರ್ಹತಾ ಸರಣಿಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ತಮ್ಮದೇ ಆದ ಎಕ್ಸ್ ರೇಟೆಡ್ ವೆಬ್‌ಸೈಟ್‌ನ ಮೂಲಕ ಸಬ್‌ಸ್ಟ್ರೈಬರ್‌ಗಳಿಗೆ ಸೆನ್ಸಾರ್ ರಹಿತ ನೀಲಿಚಿತ್ರಗಳನ್ನು ಹಂಚುತ್ತಿದ್ದಾರೆ. ‘ಆಸ್ಟ್ರೇಲಿಯನ್ ಸರ್ಫಿಂಗ್‌ನ ಕರ್ಡಾಶಿಯನ್’ ಎಂಬ ಅಡ್ಡಹೆಸರನ್ನೂ ಅವರು ಹೊಂದಿದ್ದರು.

ಸರ್ಫಿಂಗ್ ತಾರೆ ಎಲ್ಲೀ ಜೀನ್ ಕೋಫಿ ಅವರ ಈ ನಡೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ನಡುವೆ ಅವರು ತಮಗೆ ಸಿಕ್ಕಿರುವ ಬೆಂಬಲದ ಬಗ್ಗೆ ಖುಷಿಪಟ್ಟಿದ್ದಾರೆ. ವೃತ್ತಿಜೀವನದ ಬದಲಾವಣೆಯನ್ನು ಅವರು ‘ವಿಮುಕ್ತಿ’ ಎಂದು ಬಣ್ಣಿಸಿದ್ದಾರೆ. ‘ಜೀವನದ ಎಲ್ಲ ಹೆಜ್ಜೆಯಂತೆ ಇಲ್ಲೂ ಎಲ್ಲವೂ ಸಮಾನವಾಗಿದೆ. ಕೆಲವರು ತೆಗಳುತ್ತಿದ್ದಾರೆ. ಕೆಲವರು ಇಷ್ಟಪಡುತ್ತಿದ್ದಾರೆ. ಎಲ್ಲವನ್ನೂ ಎದುರಿಸಲು ನಾನು ಸದೃಢವಾಗಿದ್ದೇನೆ. ನಾನು ಮಾಡಲು ಬಯಸಿರುವುದನ್ನು ಧೈರ್ಯದಿಂದ ಮಾಡುತ್ತೇನೆ’ ಎಂದು 25 ವರ್ಷದ ಎಲ್ಲೀ ಜೀನ್ ಕೋಫಿ ಹೇಳಿದ್ದಾರೆ.

ಎಕ್ಸ್ ರೇಟೆಡ್ ವೆಬ್‌ಸೈಟ್ ಅನಾವರಣಗೊಳಿಸಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಅವರ ಹಿಂಬಾಲಕರ ಸಂಖ್ಯೆ 1 ದಶಲಕ್ಷ ದಾಟಿದೆ. ಈ ಹೊಸ ‘ಉದ್ಯಮ’ ತನ್ನ ಜೀವನ ಬದಲಾಯಿಸುತ್ತಿದೆ. ಟೀಕೆಗಳಿಗೆ ಅಂಜದೆ ಇತರ ಮಹಿಳೆಯರೂ ಇದೇ ‘ಸಬಲೀಕರಣ’ದ ಹಾದಿ ಹಿಡಿಯಬೇಕೆಂದು ಎಲ್ಲೀ ಜೀನ್ ಕೋಫಿ ಹೇಳಿದ್ದಾರೆ.

ಸರ್ಫಿಂಗ್ ಕ್ರೀಡೆಯಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿದೆ ಎಂದು ದೂರಿರುವ ಅವರು, ‘ಸರ್ಫಿಂಗ್‌ನಲ್ಲಿ ಮಹಿಳೆಯರು ಪುರುಷರಂತೆ ಇರಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಪುರುಷರು ಪುರುಷರಂತೆಯೇ ನಡೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ. ಎಲ್ಲಿ ಜೀನ್ ಕೋಫಿ 2017ರಲ್ಲಿ ವಿಶ್ವ ರ‌್ಯಾಂಕಿಂಗ್‌ನಲ್ಲಿ 97ನೇ ಸ್ಥಾನ ಅಲಂಕರಿಸಿದ್ದರು.