ಕ್ರೀಡೆ

ಐಪಿಎಲ್​ ಬಳಿಕ ವಿಶ್ವಕಪ್​ನಲ್ಲೂ ಮುಂದುವರೆದ ಕಳಪೆ ಫಾರ್ಮ್​; ಏನಾಯ್ತು ಮ್ಯಾಕ್ಸ್​ವೆಲ್​ಗೆ? ​

ಬಾರ್ಬಡೋಸ್​: ಇಲ್ಲಿನ ಕೆನ್ಸಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಮನ್​ ವಿರುದ್ಧ 39ರನ್​ಗಳ ಗೆಲುವು ಕಾಣುವ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇನ್ನೂ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಕಣಕ್ಕಿಳಿದಿದ್ದ ಮ್ಯಾಕ್ಸ್​ವೆಲ್​ ತಮ್ಮ ಕಳಪೆ ಫಾರ್ಮ್​ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಕಳಪೆ ಫಾರ್ಮ್​ ಮೂಲಕ ಸುದ್ದಿಯಾಗಿದ್ದ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಗ್ಲೆನ್​ ಮ್ಯಾಕ್ಸ್​ವೆಲ್​ ಈಗ ಮತ್ತೆ ಸುದ್ದಿಯಾಗಿದ್ದಾರೆ. ಒಮನ್​ ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತುವ ಮೂಲಕ ಮ್ಯಾಕ್ಸ್​ವೆಲ್​ ಕ್ರೀಡಾ ವಲಯದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಟಿ20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಗೋಲ್ಡನ್ ಡಕ್​ಗೆ ಔಟಾಗಿದ್ದಾರೆ.

ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಟಿ20 ವಿಶ್ವಕಪ್ 2024 ಅನ್ನು ಮ್ಯಾಕ್ಸಿ ಶೂನ್ಯದೊಂದಿಗೆ ಶುರು ಮಾಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್​ನಲ್ಲಿ ಸೊನ್ನೆಗಳ ಮೂಲಕ ಮ್ಯಾಕ್ಸ್​ವೆಲ್ ಪೆವಿಲಿಯನ್​ ಪರೇಡ್ ನಡೆಸಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್​ವೆಲ್​ 5 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಎಲ್ಲರ ಗಮನ ಸೆಳೆದಿದ್ದ ಮ್ಯಾಕ್ಸ್​ವೆಲ್​ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಗಳಿಸಿದ್ದು, 52 ರನ್​ಗಳು ಮಾತ್ರ. ಅಂದರೆ 10 ಪಂದ್ಯಗಳಲ್ಲಿ 5.78 ಸರಾಸರಿಯಂತೆ ಕೇವಲ 52 ರನ್​ಗಳನ್ನು ಮಾತ್ರ ಕಲೆಹಾಕಿದ್ದರು. ಇದೀಗ ಟಿ-20 ವಿಶ್ವಕಪ್​ನಲ್ಲಿ ಅವರ ಕಳಪೆ ಫಾರ್ಮ್​ ಮುಂದುವರೆದಿದ್ದು, ಒಮನ್​ನಂತಹ ತಂಡದ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್​ ಒಪ್ಪಿಸುವ ಮೂಲಕ ತಮ್ಮ ಕಳಪೆ ಫಾರ್ಮ್​ಅನ್ನು ಮುಂದುವರೆಸಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ಮ್ಯಾಕ್ಸ್​ವಲ್​ ತಮ್ಮ ಕಳಪೆ ಫಾರ್ಮ್​ಅನ್ನು ಮುಂದುವರೆಸಿದರೆ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ.