ಕ್ರೀಡೆ

ಭಾರತೀಯ ಕ್ರೀಡೆಯ ಡಿಜಿಟಲೀಕರಣ ಪ್ರಕ್ರಿಯೆ ಶುರು; ಕ್ರೀಡಾಪಟುಗಳಿಗೆ ಇನ್ನು ಡಿಜಿಟಲ್​ ಪ್ರಮಾಣಪತ್ರ

ನವದೆಹಲಿ: ಭಾರತೀಯ ಕ್ರೀಡೆಯನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಗುರುವಾರ ಚಾಲನೆ ನೀಡಿದೆ. ಇದರನ್ವಯ ದೇಶದ ಎಲ್ಲ ನೋಂದಾಯಿತ ಕ್ರೀಡಾಪಟುಗಳಿಗೆ ಇನ್ನು ಡಿಜಿಟಲ್​ ಪ್ರಮಾಣಪತ್ರವನ್ನು ವಿತರಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಘೋಷಿಸಿದ್ದಾರೆ. ಇದು ಕ್ರೀಡಾಪಟುಗಳ ಸ್ಪರ್ಧೆ ಮತ್ತು ನಿರ್ವಹಣೆಯ ದಾಖಲೆಗಳನ್ನು ಪಾರದರ್ಶಕಗೊಳಿಸುವ ಕ್ರಮವೆನಿಸಿದೆ.

"ಕ್ರೀಡಾಪಟುಗಳೇ ಮೊದಲು' ಎಂಬ ಪಾಲಿಸಿಯ ಅನ್ವಯ ಕ್ರೀಡಾಪಟುಗಳಿಗೆ ಐಟಿ ಸಚಿವಾಲಯದ ಪ್ರಮುಖ ಯೋಜನೆಯಾದ ಡಿಜಿಲಾಕರ್​ ಮೂಲಕ ಪ್ರಮಾಣಪತ್ರಗಳನ್ನು ವಿತರಿಸಲು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್​ಎಸ್​ಎಫ್​​) ಸೂಚಿಸಲಾಗಿದೆ. ದಾಖಲೆಗಳ ಸುಲಭ ಲಭ್ಯತೆ, ಭದ್ರತೆ, ನಿಖರತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ ಇದು ಎನ್​ಎಸ್​ಎಫ್​​ಗಳ ಆಡಳಿತದಲ್ಲಿ ದಕ್ಷತೆಯನ್ನೂ ಹೆಚ್ಚಿಸಲಿದೆ. ಇದು ರಾಷ್ಟ್ರದೆಲ್ಲೆಡೆ ಇರುವ ನಮ್ಮ ಕ್ರೀಡಾಪಟುಗಳ ಬದುಕನ್ನು ಮತ್ತಷ್ಟು ಸುಲಭವಾಗಿಸುತ್ತದೆ. ಅವರ ಪ್ರತಿ ಕ್ರೀಡಾಕೂಟದ ಸ್ಪರ್ಧೆಯ ದಿನಾಂಕಗಳು ಈ ಡಿಟಿಟಲ್​ ಪ್ರಮಾಣಪತ್ರದಲ್ಲಿ ಇರುತ್ತದೆ. ಇವು ಅವರ ಸಾಧನೆಗಳ ಪುರಾವೆಯೂ ಆಗಿರುತ್ತವೆ' ಎಂದು ಅನುರಾಗ್​ ಠಾಕೂರ್​ ಸಾಮಾಜಿಕ ಜಾಲತಾಣ "ಎಕ್ಸ್​'ನಲ್ಲಿ ವಿವರಿಸಿದ್ದಾರೆ.

ಈ ತಾಂತ್ರಿಕ ಪ್ರಗತಿಯನ್ನು ಸ್ವೀಕರಿಸಲು ಮತ್ತು ಸುಗಮ ಪರಿವರ್ತನೆಗೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ಕ್ರೀಡಾಪಟುಗಳಿಗೆ ಒದಗಿಸುವಂತೆ ಎನ್​ಎಸ್​ಎಫ್​​ಗಳಿಗೆ ಅನುರಾಗ್​ ವಿನಂತಿಸಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್​ 29ರ ರಾಷ್ಟ್ರೀಯ ಕ್ರೀಡಾ ದಿನದಂದು ಅನುರಾಗ್​ ಠಾಕೂರ್​ ಮೊದಲ ಬಾರಿಗೆ ಕ್ರೀಡೆಯ ಡಿಜಿಟಲೀಕರಣದ ಬಗ್ಗೆ ಮಾತನಾಡಿದ್ದರು ಮತ್ತು ಕ್ರೀಡಾಪಟುಗಳಿಗೆ ಎಲ್ಲವನ್ನೂ ಸರಳಗೊಳಿಸುವುದಾಗಿ ಭರವಸೆ ನೀಡಿದ್ದರು.

ಜೂನ್​ 1ರಿಂದ ವಿತರಣೆ

ಮುಂದಿನ ಜೂನ್​ 1ರ ನಂತರ ಕ್ರೀಡಾಪಟುಗಳು ಭಾಗವಹಿಸಿದ ಕ್ರೀಡಾಕೂಟಗಳಿಗೆ ಆಯಾ ಕ್ರೀಡಾ ಒಕ್ಕೂಟಗಳು ಡಿಜಿಲಾಕರ್​ ಮೂಲಕ ನೀಡಿದ ಪ್ರಮಾಣಪತ್ರಗಳಷ್ಟೇ ಮಾನ್ಯವಾಗಿರುತ್ತವೆ. ನಂತರದಲ್ಲಿ ಯಾವುದೇ ಮುದ್ರಿತ ಪ್ರಮಾಣಪತ್ರಗಳನ್ನು ವಿತರಿಸಲಾಗುವುದಿಲ್ಲ ಮತ್ತು ಅವುಗಳನ್ನು ಸರ್ಕಾರಿ ಅಥವಾ ಇತರ ಉಪಯೋಗಗಳಿಗೆ ಮಾನ್ಯ ಮಾಡಲಾಗುವುದಿಲ್ಲ. ಡಿಜಿಲಾಕರ್​ನಲ್ಲಿ ಸಂಗ್ರಹಗೊಳಿಸುವ ಈ ಪ್ರಮಾಣಪತ್ರಗಳ ಲಭ್ಯತೆ, ಹಂಚಿಕೆ, ಪರಿಶೀಲನೆ ಸುಲಭವಾಗಿರುತ್ತದೆ. ಮುದ್ರಿತ ಪ್ರಮಾಣಪತ್ರಗಳನ್ನು ಭದ್ರವಾಗಿಟ್ಟುಕೊಳ್ಳುವುದು ಕೂಡ ಕ್ರೀಡಾಪಟುಗಳಿಗೆ ಇದುವರೆಗೆ ತಲೆನೋವಾಗಿತ್ತು. ಮುದ್ರಿತ ಪ್ರಮಾಣಪತ್ರಗಳನ್ನು ಕ್ರೀಡಾಪಟುಗಳಿಗೆ ತಲುಪಿಸುವುದು ಕ್ರೀಡಾ ಆಡಳಿತಾಧಿಕಾರಿಗಳಿಗೆ ಕೂಡ ಸವಾಲಿನ ಕೆಲಸವಾಗಿತ್ತು.