ಕ್ರೀಡೆ

ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಪ್ರಶಸ್ತಿ ಸುತ್ತಿನ ಹೋರಾಟ ಮತ್ತು ಆತಿಥೇಯರ ಎದುರಿನ ಟೆಸ್ಟ್​ ಸರಣಿಗಾಗಿ ಭಾರತ ತಂಡ ಸುದೀರ್ವಾದ ಇಂಗ್ಲೆಂಡ್​ ಪ್ರವಾಸಕೈಗೊಂಡಿದೆ. ಪ್ರವಾಸದ ಆರಂಭದಲ್ಲಿ ಭಾರತ ತಂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​ಗೂ ಒಳಪಟ್ಟಿದೆ. ಫಿಟ್ನೆಸ್​ ಗೊಂದಲದ ನಡುವೆಯೂ ಬ್ಯಾಟ್ಸ್​ಮನ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಕೂಡ ಭಾರತ ತಂಡದ ಜತೆಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ನಡುವೆ ಬಿಸಿಸಿಐ, ಪ್ರವಾಸಕ್ಕೆ ಪತ್ನಿ-ಮಕ್ಕಳು, ಗೆಳತಿಯರನ್ನು ಕರೆದೊಯ್ಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಕೆಎಲ್​ ರಾಹುಲ್​ ಗೆಳತಿ ಹಾಗೂ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರೊಂದಿಗೆ ತೆರಳಿರುವರೇ ಎಂಬ ಅನುಮಾನ ಕ್ರಿಕೆಟ್​ ಪ್ರೇಮಿಗಳಲ್ಲಿ ಮೂಡಿದೆ. ಇವರಿಬ್ಬರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುವ ಚಿತ್ರಗಳಿಂದ ಇದಕ್ಕೆ ಕೆಲ ಪುರಾವೆಗಳೂ ಲಭಿಸಿವೆ.

ಪ್ರವಾಸಕ್ಕೆ ತೆರಳಿದ ದಿನದಿಂದಲೂ ಕೆಎಲ್​ ರಾಹುಲ್​ ಇನ್​ಸ್ಟಾಗ್ರಾಂನಲ್ಲಿ ಕೆಲ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಈ ನಡುವೆ ಆಥಿಯಾ ಶೆಟ್ಟಿ ಕೂಡ ಕಳೆದ ಕೆಲ ದಿನಗಳಿಂದ ಪ್ರಕಟಿಸುತ್ತಿರುವ ಚಿತ್ರಗಳಿಂದ ಇವರಿಬ್ಬರೂ ಸೌಥಾಂಪ್ಟನ್​ನಲ್ಲೇ ಕ್ವಾರಂಟೈನ್​ನಲ್ಲಿರುವುದು ಬಹುತೇಕ ಪಕ್ಕಾ ಆಗಿದೆ. ಇಬ್ಬರೂ ಕಳೆದ ಕೆಲ ಸಮಯದಿಂದ ಡೇಟಿಂಗ್​ನಲ್ಲಿರುವುದು ಈಗಾಗಲೆ ಬಹಿರಂಗಗೊಂಡಿತ್ತು.

ರಾಹುಲ್​ ಕೆಲ ದಿನಗಳ ಹಿಂದೆ ವಿಮಾನದಿಂದ ಸೌಥಾಂಪ್ಟನ್​ಗೆ ಬಂದಿಳಿದ ಚಿತ್ರವನ್ನು ಪ್ರಕಟಿಸಿದ್ದರು. ಅದೇ ಸಮಯಕ್ಕೆ ಅಥಿಯಾ ಶೆಟ್ಟಿ ಕೂಡ ಆಕಾಶದ ಚಿತ್ರವನ್ನು ಪ್ರಕಟಿಸಿದ್ದು, ಇಬ್ಬರ ಚಿತ್ರದಲ್ಲಿನ ವಾತಾವರಣ ಬಹುತೇಕ ಹೋಲಿಕೆಯಾಗಿದೆ. ಇಬ್ಬರೂ ಸೌಥಾಂಪ್ಟನ್​ನಲ್ಲೇ ಇದ್ದೀರಾ ಎಂದು ಅನೇಕ ಅಭಿಮಾನಿಗಳು ಇನ್​ಸ್ಟಾಗ್ರಾಂ ಕಾಮೆಂಟ್​ನಲ್ಲಿ ಪ್ರಶ್ನೆಗಳನ್ನೂ ಎಸೆದಿದ್ದಾರೆ. ಇದಕ್ಕೆ ಉತ್ತರ ಬರದಿದ್ದರೂ, ಇನ್ನೂ ಕೆಲವು ಸುಳಿವುಗಳಿಂದ ಕ್ರಿಕೆಟ್​ ಪ್ರೇಮಿಗಳು, ಅವರಿಬ್ಬರು ಕ್ವಾರಂಟೈನ್​ನಲ್ಲಿ ಜತೆಯಲ್ಲಿರುವುದನ್ನು ಊಹಿಸಿದ್ದಾರೆ.

ಇನ್ನು ರಾಹುಲ್​ ಹೂವಿನ ಗಿಡವೊಂದರ ಎದುರು ಪೋಸ್​ ನೀಡಿರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.ಇದೇ ವೇಳೆ ಅದೇ ಹೂವಿನ ಗಿಡದ ಚಿತ್ರವನ್ನು ಅಥಿಯಾ ಶೆಟ್ಟಿ ಕೂಡ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಕೋಣೆಯೊಂದರ ಬೆಡ್​ ಮೇಲೆ ಕುಳಿತುಕೊಂಡಿರುವ ಚಿತ್ರವೊಂದನ್ನು ಪ್ರಕಟಿಸಿದ್ದ ಅಥಿಯಾ ಶೆಟ್ಟಿ, ಈ ವೇಳೆ ಜೀನ್ಸ್​ ಜಾಕೆಟ್​ ಒಂದನ್ನು ಧರಿಸಿದ್ದರು. ಅಂಥದ್ದೇ ಜಾಕೆಟ್​ ಹಾಕಿಕೊಂಡು ಕೆಎಲ್​ ರಾಹುಲ್​ ಕೂಡ ಪೋಸ್​ ನೀಡಿರುವ ಚಿತ್ರಗಳನ್ನು ಪೋಸ್ಟ್​ ಮಾಡಿದ್ದರು. ಹೀಗಾಗಿ ಅದು ರಾಹುಲ್​ನದ್ದೇ ಜಾಕೆಟ್​ ಎಂಬುದು ಖಚಿತಗೊಂಡಿದೆ. ರಾಹುಲ್​ ಸೌಥಾಂಪ್ಟನ್​ ಕ್ರೀಡಾಂಗಣದ ಆವರಣದಲ್ಲಿ ಕ್ವಾರಂಟೈನ್​ ಆಗಿರುವುದರಿಂದ ಗಾರ್ಡನ್​ನಲ್ಲಿ ಕುಳಿತ ಚಹಾ ಸೇವಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಅಥಿಯಾ ಶೆಟ್ಟಿ ಪೋಸ್ಟ್​ ಮಾಡಿರುವ ಕಪ್ಪುಬಿಳುಪು ಚಿತ್ರದಲ್ಲೂ ಹಿನ್ನೆಲೆಯಲ್ಲಿ ಅದೇ ಗಾರ್ಡನ್​ ಮತ್ತು ಅದರ ಬೇಲಿ ಕಾಣಿಸಿದೆ. ಮಂಗಳೂರು ಮೂಲದ ನಟ ಸುನೀಲ್​ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಕೆಲವು ಬಾಲಿವುಡ್​ ಸಿನಿಮಾಗಳಲ್ಲೂ ಈಗಾಗಲೆ ನಟಿಸಿದ್ದಾರೆ.