ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಶುಕ್ರವಾರ ಆರಂಭಗೊಂಡ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ ತಂಡ, ಆಸೀಸ್ ವೇಗಿಗಳ ಮಾರಕ ದಾಳಿಗೆ ಕುಸಿದು 72.2 ಓವರ್ಗಳಲ್ಲಿ 185 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಆಸೀಸ್ ದಿನದಂತ್ಯಕ್ಕೆ 3 ಓವರ್ ಎದುರಿಸಿ 1 ವಿಕೆಟ್ಗೆ 9 ರನ್ ಗಳಿಸಿದೆ. ಆಸೀಸ್ ಸದ್ಯ 176 ರನ್ ಹಿನ್ನಡೆಯಲ್ಲಿದ್ದು, ಯುವ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ 7 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದ ಕೊನೇ ಎಸೆತದಲ್ಲಿ ಬುಮ್ರಾ, ಉಸ್ಮಾನ್ ಖವಾಜ (2) ವಿಕೆಟ್ ಉರುಳಿಸಿ, ಆಸೀಸ್ಗೂ ಬ್ಯಾಟಿಂಗ್ ಸುಲಭವಿಲ್ಲ ಎಂಬ ಸಂದೇಶ ರವಾನಿಸಿದರು.
ಮೊದಲ ದಿನದ ಕೊನೇ ಎಸೆತಕ್ಕೆ ಮುನ್ನ ಜಸ್ಪ್ರೀತ್ ಬುಮ್ರಾ ಮತ್ತು ಆಸೀಸ್ ಯುವ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ನಡುವೆ ಜಟಾಪಟಿ ಏರ್ಪಟ್ಟಿತು. ಇದು ಭಾರತ ತಂಡವನ್ನು ಕೆರಳಿಸಿದ್ದಲ್ಲದೆ, 2ನೇ ದಿನ ಹೊಸ ಜೋಶ್ನಲ್ಲಿ ಕಣಕ್ಕಿಳಿಯುವ ಸ್ಫೂರ್ತಿಯನ್ನೂ ತುಂಬಿತು.
ದಿನದ ಕೊನೇ ಎಸೆತ ಎಸೆಯಲು ಬುಮ್ರಾ ರನ್ಅಪ್ನಲ್ಲಿದ್ದಾಗ ಸ್ಟ್ರೈಕರ್ ಖವಾಜ ಬೇಗನೆ ಸಿದ್ಧರಾಗದೆ ಸಮಯ ವ್ಯರ್ಥಗೊಳಿಸುತ್ತಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬುಮ್ರಾ ಬೌಲಿಂಗ್ಗೆ ಮುಂದಾದಾಗ, ನಾನ್-ಸ್ಟ್ರೈಕರ್ನಲ್ಲಿದ್ದ ಕಾನ್ಸ್ಟಾಸ್ ವಾಗ್ವಾದಕ್ಕೆ ಮುಂದಾದರು. ಬುಮ್ರಾ ಕೂಡ ಅದಕ್ಕೆ ದಿಟ್ಟ ಉತ್ತರ ನೀಡಿದಾಗ ಅಂಪೈರ್ ಇಬ್ಬರನ್ನೂ ಸಮಾಧಾನಪಡಿಸಿದರು. ನಂತರದ ಎಸೆತದಲ್ಲಿ ಖವಾಜ, 2ನೇ ಸ್ಲಿಪ್ನಲ್ಲಿ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ಔಟಾದರು. ಇದರ ಬೆನ್ನಲ್ಲೇ ಬುಮ್ರಾ ತಿರುಗಿಬಂದು ಕಾನ್ಸ್ಟಾಸ್ರನ್ನು ದುರುಗುಟ್ಟಿ ನೋಡಿದರು. ಮಾತ್ರವಲ್ಲದೆ ಎಲ್ಲ ಭಾರತೀಯ ಆಟಗಾರರು ಕಾನ್ಸ್ಟಾಸ್ರನ್ನು ಬಹುತೇಕ ಸುತ್ತುವರಿದು ಸಂಭ್ರಮಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಇದು ಭಾರತ ತಂಡದಲ್ಲಿ ಒಡಕು ಮೂಡಿರುವ ವರದಿಗಳಿಗೆ ನೀಡಿದ ದಿಟ್ಟ ಉತ್ತರದಂತೆಯೂ ಕಾಣಿಸಿತು.