ಜಪಾನ್: ಭಾರತದ ಮಟ್ಟಿಗೆ ಇಂದಿನ ಬುಧವಾರ (ಸೆ.30) ಬಂಗಾರದ ಬುಧವಾರವಾಗಿ ಮಾರ್ಪಟ್ಟಿರುವುದು ನಿಜವಾಗಿದೆ. ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಎರಡು ಚಿನ್ನದ ಪದಕ ಪಡೆದ ಹೊಸ್ತಿಲಲ್ಲೇ, ಈಗ ಟ್ರ್ಯಾಪ್ ಮಿಶ್ರ ಶೂಟಿಂಗ್ ಸ್ಫರ್ಧೆಯಲ್ಲಿ ನೀರು ಧಾಂಡಾ ಹಾಗೂ ಕಲ್ಯಾಣ್ ಚೆನೈ ಜೋಡಿ ಮತ್ತೊಂದು ಬಂಗಾರದ ಪದಕವನ್ನು ದೇಶಕ್ಕೆ ಗೆದ್ದು ತಂದಿದ್ದಾರೆ.
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಟ್ರ್ಯಾಪ್ ಮಿಶ್ರ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ನೀರು-ಕಲ್ಯಾಣ್ ಜೋಡಿ ಬಂಗಾರದ ಪದಕವನ್ನು ಗೆದ್ದು ಬೀಗಿದ್ದಾರೆ. ನೀರು ಈ ಕ್ರೀಡಾಕೂಟದಲ್ಲಿ ಪಡೆದ ಎರಡನೇ ಚಿನ್ನದ ಪದಕ ಇದಾಗಿದೆ.
ಸ್ಪರ್ಧೆಯ ಪ್ರಾರಂಭದಿಂದಲೂ ನೀರು ಧಾಂಡಾ ಹಾಗೂ ಕಲ್ಯಾಣ್ ಚೆನೈ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಮೊದಲ ಸುತ್ತಿನಲ್ಲಿ 6, ಎರಡರಲ್ಲಿ 16, ಮೂರರಲ್ಲಿ 26 ಪಡೆದು ಒಟ್ಟು 34 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. 32 ಅಂಕಗಳನ್ನು ಪಡೆದ ಕತಾರ್ ತಂಡ ಬೆಳ್ಳಿ ಪದಕಕ್ಕೆ ಭಾಜನವಾದರೆ, 23 ಪಾಯಿಂಟ್ ಗಳಿಸಿ ಚೀನಾ ತಂಡ ಕಂಚಿಗೆ ಸಂತೃಪ್ತವಾಗಿದೆ.
ಇನ್ನೂ, ಭಾರತದ ಖ್ಯಾತ ಶೂಟರ್, ನೀರು ಧಾಂಡಾ, 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಸಾಧನೆ ಮೆರೆಯುತ್ತಾ ಇಲ್ಲಿವರೆಗೆ ಎರಡು ಬಂಗಾರ ಹಾಗೂ ಒಂದು ಬೆಳ್ಳಿ ಒಟ್ಟಿಗೆ ಒಟ್ಟು ಮೂರು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಟ್ರ್ಯಾಪ್ ಶೂಟಿಂಗ್ ಟೀಮ್ (ಮಹಿಳಾ) ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರೆ, ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ನೀರು ಧಾಂಡಾ ಬಂಗಾರದ ಪದಕ ಗೆಲ್ಲುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಅಂತೆಯೇ ಇಂದು ಕಲ್ಯಾಣ್ ಚೆನೈ ಜೊತೆ ಟ್ರ್ಯಾಪ್ ಮಿಶ್ರ ಶೂಟಿಂಗ್‌ನಲ್ಲಿ ಮತ್ತೊಂದು ಬಂಗಾರದ ಪದಕ ಪಡೆಯುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.
ಶೂಟಿಂಗ್ ಜೊತೆಗೆ ಭಾರತದ ಯುವ ಬಿಲ್ಲುಗಾರ್ತಿಯರ ತಂಡ ಕೂಡ ಇಂದು ಬಂಗಾದ ಬೇಟೆ ಮುಂದುವರಿಸಿದ್ದಾರೆ. ಜ್ಯೋತಿ ಸುರೇಖಾ ವೆನ್ನಮ್, ಪ್ರಿಥಿಕಾ ಪ್ರದೀಪ್ ಮತ್ತು ಚಿಕಿತಾ ಥಾನಿಪಾರ್ಥಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, ಬಲಿಷ್ಟ ಚೀನಾ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಹಾಗೆಯೇ, ಕಾಂಪೌಂಡ್ ಮಿಶ್ರ ತಂಡದ ವಿಭಾಗದಲ್ಲಿ ಸಾಹಿಲ್ ಜಾಧವ್ ಮತ್ತು ಚಿಕಿತಾ ತನಿಪಾರ್ಥಿ ಜೋಡಿಯು ರೋಚಕ ಶೂಟ್-ಆಫ್‌ನಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸಿ ದೇಶಕ್ಕೆ ಎಂಟನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರೊಂದಿಗೆ ಈ ವಿಭಾಗದಲ್ಲಿ ಭಾರತವು 2028 ರ ಒಲಿಂಪಿಕ್ಸ್ಗೆ ತನ್ನ ಸ್ಥಾನವನ್ನು ಖಾತ್ರಿ ಪಡೆಸಿಕೊಂಡಿದೆ, (ಏಜೆನ್ಸೀಸ್).