ಬೆಂಗಳೂರು: ಏಷ್ಯನ್ ಗೇಮ್ಸ್ ಹುಟ್ಟಿಗೆ ಮೂಲ ಕಾರಣ ಭಾರತದ ಪ್ರೊ ಗುರುದತ್ ಸೋಂಧಿ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಸದಸ್ಯರಾಗಿದ್ದ ಅವರು 1947ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ದೇಶಗಳ ಸಭೆಯಲ್ಲಿ ಈ ಪ್ರಸ್ತಾಪ ಸಲ್ಲಿಸಿದರು. ಆಗಿನ ಪ್ರಧಾನಿ ಜವಾಹರ್ಲಾಲ್ ನೆಹರು ಇದಕ್ಕೆ "ಏಷ್ಯನ್ ಗೇಮ್ಸ್' ಎಂದು ಹೆಸರಿಡಲು ತೀರ್ಮಾನಿಸಿದರು ಮತ್ತು 1951ರಲ್ಲಿ ಭಾರತದ ಆತಿಥ್ಯದಲ್ಲೇ ಚೊಚ್ಚಲ ಕ್ರೀಡಾಕೂಟ ನಡೆಸಲು ನಿರ್ಧರಿಸಿದರು.
ಪಟಿಯಾಲಾದ ಮಹಾರಾಜ ಯದ್ವೇಂದ್ರ ಸಿಂಗ್ ಕೂಟಕ್ಕೆ ಕ್ರೀಡಾಜ್ಯೋತಿಯ ಬ್ಯಾಟನ್ ಉಡುಗೊರೆಯಾಗಿ ನೀಡಿದರು. ದೆಹಲಿಯಲ್ಲಿ ನಡೆದ ಚೊಚ್ಚಲ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 11 ದೇಶಗಳೆಂದರೆ ಭಾರತ, ಅಫ್ಘಾನಿಸ್ತಾನ, ಬರ್ಮಾ, ಶ್ರೀಲಂಕಾ, ಇಂಡೋನೇಷ್ಯಾ, ಇರಾನ್, ಜಪಾನ್, ನೇಪಾಳ, ಪಿಲಿಪ್ಪೆನ್ಸ್, ಸಿಂಗಾಪುರ ಮತ್ತು ಥಾಯ್ಲೆಂಡ್.
ಜಪಾನ್ 24 ಸ್ವರ್ಣ, 21 ಬೆಳ್ಳಿ ಮತ್ತು 15 ಕಂಚು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ನಂತರ 1982ರಲ್ಲಿ 9ನೇ ಆವೃತ್ತಿಯ ಏಷ್ಯಾಡ್ಗೂ ನವದೆಹಲಿ ಆತಿಥ್ಯ ವಹಿಸಿತ್ತು.