ಕ್ರೀಡೆ

ಏಷ್ಯಾಕಪ್‌ಗೆ ಸ್ಟಾರ್ ಬ್ಯಾಟರ್ ಅನುಮಾನ

ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿರುವ ಟೀಮ್ ಇಂಡಿಯಾ ಪಾಲಿಗೆ ಮತ್ತೊಂದು ಆಘಾತ ಎದುರಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖ ಹೊಂದಲು ಮಧ್ಯಮ ಕ್ರಮಾಂಕ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ದೀರ್ಘ ಸಮಯ ಹಿಡಿಯಲಿದ್ದು, ಸೆಪ್ಟೆಂಬರ್‌ನಲ್ಲಿ ಆಯೋಜನೆಯಾಗಿರುವ ಹೈಬ್ರಿಡ್ ಮಾದರಿಯ ಏಷ್ಯಾಕಪ್ ಟೂರ್ನಿವೇಳೆಗೆ ಭಾರತ ತಂಡಕ್ಕೆ ಮರಳುವುದು ಅನುಮಾನ ಎನ್ನಲಾಗಿದೆ.

ಐಪಿಎಲ್‌ನಿಂದ ಹೊರಗುಳಿಯುವ ಮೂಲಕ ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ಬಳಿಕ ಪುನಶ್ಚೇತನ ಶಿಬಿರಕ್ಕೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿದ್ದರು. ಬಳಿಕ ಏಷ್ಯಾಕಪ್ ವೇಳೆಗೆ ಟೀಮ್ ಇಂಡಿಯಾದಲ್ಲಿ ಮರಳಿ ಸ್ಥಾನ ಪಡೆಯಲು ಅಭ್ಯಾಸ ಆರಂಭಿಸಿದ್ದರು. ಆದರೆ ಶ್ರೇಯಸ್ ಅಯ್ಯರ್‌ಗೆ ಮರಳಿ ಬೆನ್ನು ನೋವು ಕಾಣಿಸಿಕೊಂಡಿದ್ದು ಎನ್‌ಸಿಎ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್-ನವೆಂಬರ್ ವೇಳೆಗೆ ಸಂಪೂರ್ಣ ಫಿಟ್ ಆಗುವ ಮೂಲಕ ಏಕದಿನ ವಿಶ್ವಕಪ್‌ನ ಭಾರತ ತಂಡದಲ್ಲಿ ಶ್ರೇಯಸ್ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಈಗಾಗಲೆ ಎನ್‌ಸಿಎಯಲ್ಲಿ ಜಸ್‌ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಫಿಟ್ನೆಸ್‌ನತ್ತ ತನ್ನ ಗಮನಹರಿಸಿದ್ದಾರೆ.