ಕ್ರೀಡೆ

ಸೆಪ್ಟೆಂಬರ್ 10 ರಿಂದ ಏಷ್ಯಾ ಕಪ್: ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆಯೇ? ಬಿಸಿಸಿಐ ಹೇಳಿದ್ದೇನು? Asia Cup 2025

Asia Cup 2025 : ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಏಷ್ಯಾ ಕಪ್-2025 ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಜುಲೈ ಮೊದಲ ವಾರದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಪೂರ್ವ ನಿಗದಿಯಂತೆ ಭಾರತವು ಈ ಮೆಗಾ ಈವೆಂಟ್ ಅನ್ನು ಆಯೋಜಿಸಲಿದೆ. ಭಾರತ, ಶ್ರೀಲಂಕಾ, ಯುಎಇ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಏಷ್ಯಾ ಕಪ್​ನಲ್ಲಿ ಸ್ಪರ್ಧಿಸಲಿವೆ. ಇನ್ನು ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜನೆ ಮಾಡಿತ್ತು. ಟೀಮ್​ ಇಂಡಿಯಾ ಆಟಗಾರರ ರಕ್ಷಣಾ ದೃಷ್ಟಿಯಿಂದ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ದುಬೈನಲ್ಲಿ ಆಯೋಜಿಸಲಾಗಿತ್ತು. ಆರಂಭದಲ್ಲಿ ಇದಕ್ಕೆ ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ತದನಂತರದಲ್ಲಿ ಕೆಲ ಷರತ್ತುಗಳನ್ನು ಐಸಿಸಿ ಮುಂದಿಟ್ಟು ಪಾಕ್​ ಒಪ್ಪಿಕೊಂಡಿತು. ಒಪ್ಪಂದ ಪ್ರಕಾರ, ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ.

ಆದರೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಈ ಮೆಗಾ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ಭಾಗವಹಿಸಿದರೆ, ಭಾರತ ತನ್ನ ಸೋದರಸಂಬಂಧಿ ತಂಡದ ವಿರುದ್ಧ ಆಡುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಮುಂದಿನ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯಿಂದಾಗಿ ಭಾರತ ಏಷ್ಯಾ ಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂಬ ಆರಂಭಿಕ ವರದಿಗಳು ಬಂದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ವರದಿಗಳನ್ನು ನಿರಾಕರಿಸಿದರು. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು. ಇತ್ತೀಚೆಗೆ, ಮತ್ತೊಬ್ಬ ಹಿರಿಯ ಬಿಸಿಸಿಐ ಅಧಿಕಾರಿ ಕೂಡ ಇದೇ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾಗವಹಿಸದಿರುವ ಬಗ್ಗೆ ಅಥವಾ ಪಂದ್ಯಗಳನ್ನು ಬಹಿಷ್ಕರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಸರ್ಕಾರದ ನಿರ್ಧಾರವೇ ಅಂತಿಮ

ಐಸಿಸಿ ಈವೆಂಟ್‌ಗಳಲ್ಲಿ ನಾವು ಪಾಕಿಸ್ತಾನ ವಿರುದ್ಧ ಆಡುತ್ತೇವೆ. ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಒಂದು ವೇಳೆ ಸರ್ಕಾರದಿಂದ ನಮಗೆ ಅನುಮತಿ ಸಿಗದಿದ್ದರೆ, ನಾವು ಅದಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿಯ ಕುರಿತು ನಮಗೆ ಸ್ಪಷ್ಟತೆ ಸಿಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ. (ಏಜೆನ್ಸೀಸ್​)