ಕ್ರೀಡೆ

ರಾಜ್​ಕೋಟ್​ ಟೆಸ್ಟ್​ ಪಂದ್ಯದಿಂದ ದಿಢೀರ್​ ಹೊರನಡೆದ ಅಶ್ವಿನ್​! ಉಳಿದ 3 ದಿನದಾಟಕ್ಕೆ ಅಲಭ್ಯ; ಹೀಗಿದೆ ಕಾರಣ...

ರಾಜ್​ಕೋಟ್: ಹಿರಿಯ ಆಫ್​​ ಸ್ಪಿನ್ನರ್​ ಆರ್​. ಅಶ್ವಿನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ ವಿಶ್ವದ 9ನೇ ಬೌಲರ್​ ಮತ್ತು 2ನೇ ಭಾರತೀಯರೆಂಬ ಮೈಲಿಗಲ್ಲನ್ನು ಶುಕ್ರವಾರ ರಾಜ್​ಕೋಟ್​ನಲ್ಲಿ ನೆಟ್ಟರು. ಈ ಸಂಭ್ರಮದ ಬೆನ್ನಲ್ಲೇ, ತಾಯಿಯ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್​. ಅಶ್ವಿನ್​ ರಾಜ್​ಕೋಟ್​ ಟೆಸ್ಟ್​ ಪಂದ್ಯದಿಂದ ಹೊರನಡೆದಿದ್ದಾರೆ. ಇದರಿಂದ ಅವರು ಪಂದ್ಯದ ಉಳಿದ 3 ದಿನದಾಟದಲ್ಲಿ ಮೈದಾನಕ್ಕೆ ಇಳಿಯುವುದಿಲ್ಲ. ಅಶ್ವಿನ್​ ಬದಲಿಗೆ ಬೇರೆ ಯಾವ ಆಟಗಾರರೂ ಬೌಲಿಂಗ್ ಅಥವಾ ಬ್ಯಾಟಿಂಗ್​ ಮಾಡಲು ಅವಕಾಶವಿರುವುದಿಲ್ಲ. ಫೀಲ್ಡಿಂಗ್​ ಮಾತ್ರ ಮಾಡಬಹುದಷ್ಟೆ. ಇದರಿಂದ ಭಾರತ ಪಂದ್ಯದ ಉಳಿದ ಮೂರು ದಿನ ಕೇವಲ 10 ಆಟಗಾರರೊಂದಿಗೆ ಆಡಬೇಕಾಗಿದೆ.

ಶುಕ್ರವಾರ ರಾತ್ರಿ ಬಿಸಿಸಿಐ ಈ ಬಗ್ಗೆ ಪ್ರಕಟಣೆ ನೀಡಿದ್ದು, ಅಶ್ವಿನ್​ ಕುಟುಂಬದಲ್ಲಿ ವೈದ್ಯಕಿಯ ತುರ್ತುಸ್ಥಿತಿ ಇದೆ ಎಂದು ತಿಳಿಸಿದೆ. ಜತೆಗೆ ಈ ಸಮಯದಲ್ಲಿ ಮಂಡಳಿ ಅಶ್ವಿನ್​ಗೆ ಸೂಕ್ತ ಸಹಕಾರ ನೀಡುತ್ತದೆ ಎಂದಿದೆ. ಜತೆಗೆ ಅವರ ಖಾಸಗಿ ಬದುಕನ್ನು ಗೌರವಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದೆ.

ಅಶ್ವಿನ್​ ದಿಗ್ಗಜ ಲೆಗ್​ಸ್ಪಿನ್ನರ್​ ಹಾಗೂ ಕನ್ನಡಿಗ ಅನಿಲ್​ ಕುಂಬ್ಳೆ (619) ಅವರ ನಂತರದಲ್ಲಿ 500 ವಿಕೆಟ್​ ಸಾಧನೆ ಮಾಡಿರುವ 2ನೇ ಭಾರತೀಯರಾಗಿದ್ದಾರೆ. 37 ವರ್ಷದ ಅಶ್ವಿನ್​ ಈ ಸಾಧನೆ ಮಾಡಿದ ವಿಶ್ವದ 3ನೇ ಆಫ್​ ಸ್ಪಿನ್ನರ್​ ಆಗಿದ್ದಾರೆ. ಮುರಳೀಧರನ್​ (800) ಮತ್ತು ನಾಥನ್​ ಲ್ಯಾನ್​ (517) ಮೊದಲಿಬ್ಬರು ಆಫ್​ ಸ್ಪಿನ್ನರ್​ಗಳಾಗಿದ್ದಾರೆ. ಇಂಗ್ಲೆಂಡ್​ ಆರಂಭಿಕ ಜಾಕ್​ ಕ್ರೌಲಿ ವಿಕೆಟ್​ ಕಬಳಿಸುವ ಮೂಲಕ ಅಶ್ವಿನ್​, ವೃತ್ತೀಜಿವನದ 98ನೇ ಟೆಸ್ಟ್​ನಲ್ಲಿ ಈ ಸಾಧನೆ ಮಾಡಿದರು. ತಮಿಳುನಾಡಿನ ಅಶ್ವಿನ್​ 2011ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.