ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ: ಅಶ್ವಿನ್​ ನಡೆ ಟೀಕಿಸಿ ಸ್ಫೋಟಕ ಹೇಳಿಕೆ ನೀಡಿದ ಸುನಿಲ್​ ಗವಾಸ್ಕರ್! Ashwin Retirement

Ashwin Retirement : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ (ಬಾರ್ಡರ್ ಗವಾಸ್ಕರ್ ಟ್ರೋಫಿ) ಬಳಿಕ ಟೀಮ್​ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಗೊತ್ತೇ ಇದೆ. ಅಶ್ವಿನ್​ ಅವರು ದಿಢೀರ್ ವಿದಾಯ ಹೇಳಿದ್ದಕ್ಕೆ ಭಾರತೀಯ ಅಭಿಮಾನಿಗಳೆಲ್ಲ ಬೇಸರಗೊಂಡಿರುವಾಗಲೇ ಭಾರತದ ಕ್ರಿಕೆಟ್ ದಿಗ್ಗಜ ಹಾಗೂ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ಅಶ್ವಿನ್ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಸರಣಿ ಮಧ್ಯದಲ್ಲಿ ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಅಶ್ವಿನ್ ನಿವೃತ್ತಿ ಹೊಂದಲು ಬಯಸಿದ್ದರೆ ಸರಣಿ ಮುಗಿಯುವವರೆಗೆ ಕಾಯಬೇಕಿತ್ತು ಎಂದು ಗವಾಸ್ಕರ್​ ಹೇಳಿದ್ದಾರೆ. ಅಶ್ವಿನ್ ಅವರ ಹಠಾತ್ ನಿವೃತ್ತಿ ಘೋಷಣೆಯು ಟೀಮ್ ಇಂಡಿಯಾದ ಉಳಿದ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಟೆಸ್ಟ್​ ಸರಣಿ 1-1ರ ಸಮಬಲದಲ್ಲಿದೆ. ಇಂತಹ ಹಂತದಲ್ಲಿ ಅಶ್ವಿನ್ ನಿವೃತ್ತಿ ಘೋಷಣೆ ಮಾಡಿರುವುದು ಸರಣಿಯ ಫಲಿತಾಂಶವನ್ನೇ ಬದಲಿಸಬಹುದು ಎಂದು ಗವಾಸ್ಕರ್​ ಭವಿಷ್ಯ ನುಡಿದಿದ್ದಾರೆ.

ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತಿಯಾಗಿರುವುದರಿಂದ ಭಾರತ ಉಳಿದ ಎರಡು ಪಂದ್ಯಗಳಿಗೆ ಆಟಗಾರನನ್ನು ಕಳೆದುಕೊಳ್ಳಲಿದೆ. ಈ ಹಿಂದೆ ಎಂಎಸ್ ಧೋನಿ ಕೂಡ ಸರಣಿಯ ಮಧ್ಯದಲ್ಲಿ ನಿವೃತ್ತಿಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಟೆಸ್ಟ್​ ಸರಣಿಯ ಅಂತಿಮ ಟೆಸ್ಟ್​ ಸಿಡ್ನಿಯಲ್ಲಿ ನಡೆಯಲಿದ್ದು, ಅಲ್ಲಿ ಅಶ್ವಿನ್​ಗೆ ತನ್ನ ಪ್ರಭಾವ ಬೀರಲು ಅವಕಾಶವಿತ್ತು. ಸಿಡ್ನಿ ಪಿಚ್ ಸ್ಪಿನ್ನರ್‌ಗಳನ್ನು ಬೆಂಬಲಿಸಿರುವ ಇತಿಹಾಸ ಹೊಂದಿದೆ ಎಂದು ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್ ಅವರ ನಿರ್ಧಾರವನ್ನು ಟೀಕಿಸುವ ಭರದಲ್ಲಿ ಗವಾಸ್ಕರ್ ಮತ್ತೊಂದು ಪ್ರಮುಖ ಕಾಮೆಂಟ್ ಮಾಡಿದ್ದಾರೆ. ಉಳಿದ ಸರಣಿಯಲ್ಲಿ ಅಶ್ವಿನ್‌ಗಿಂತ ವಾಷಿಂಗ್ಟನ್ ಸುಂದರ್ ಮುಂದಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಬಾರ್ಡರ್ ಗವಾಸ್ಕರ್ ಟ್ರೋಫಿ 2024-25 ರ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗಲಿದೆ. ಡಬ್ಲ್ಯುಟಿಸಿ ಫೈನಲ್ ತಲುಪಲು ಟೀಮ್ ಇಂಡಿಯಾ ಆಸೀಸ್ ವಿರುದ್ಧ ಮುಂದಿನ ಎರಡೂ ಟೆಸ್ಟ್‌ಗಳನ್ನು ಗೆಲ್ಲಬೇಕಾಗಿದೆ. ಬ್ರಿಸ್ಬೇಸ್​ನಲ್ಲಿ ನಡೆದ ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿದ್ದು ಗೊತ್ತೇ ಇದೆ. (ಏಜೆನ್ಸೀಸ್​)