ಲಖನೌ: ತವರಿನ ಏಕದಿನ ವಿಶ್ವಕಪ್ನಲ್ಲಿ ಗೆಲುವಿನ ಸಿಕ್ಸರ್ ಬಾರಿಸಲು ಸಜ್ಜಾಗಿರುವ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಏಕನಾ ಕ್ರೀಡಾಂಗಣದ ಪಿಚ್ ಸ್ಪಿನ್-ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇರುವುದರಿಂದ 3ನೇ ಸ್ಪಿನ್ನರ್ ಆಗಿ ಅಶ್ವಿನ್ರನ್ನು ಆಡಿಸಲು ಭಾರತ ಒಲವು ತೋರಿದೆ. ಆದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ತಂಡ ಸಂಯೋಜನೆ ರೂಪಿಸುವುದು ತುಸು ಸವಾಲೆನಿಸಿದೆ.
ಮೊದಲ ಪಂದ್ಯದಲ್ಲಿ ಆಸೀಸ್ ವಿರುದ್ಧ ಚೆನ್ನೈನ ಸ್ಪಿನ್-ಸ್ನೇಹಿ ಪಿಚ್ನಲ್ಲಿ ಆಡಿದ್ದ ಅಶ್ವಿನ್, ನಂತರದ 4 ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಲಖನೌದಲ್ಲಿ ಮತ್ತೆ ಅಶ್ವಿನ್ ಆಡಿಸುವ ಒಲವು ಮೂಡಿದೆ. ಆದರೆ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧವೂ ಆಡುವುದಿಲ್ಲ ಎಂಬುದು ಖಚಿತಗೊಂಡಿದೆ. ಹೀಗಾಗಿ ಈ ಬಾರಿ ಅಶ್ವಿನ್ರನ್ನು ಆಡಿಸಿದರೆ, 2ನೇ ವೇಗದ ಬೌಲರ್ ಆಗಿ ಮೊಹಮದ್ ಸಿರಾಜ್ ಮತ್ತು ಶಮಿ ಅವರಲ್ಲಿ ಒಬ್ಬರನ್ನಷ್ಟೇ ಕಣಕ್ಕಿಳಿಸಬಹುದಾಗಿದೆ.
ಕಿವೀಸ್ ವಿರುದ್ಧ ಪಂದ್ಯಕ್ಕೆ ಹಾರ್ದಿಕ್ ಅಲಭ್ಯರಾದಾಗ ಭಾರತ, ಶಮಿ ಮತ್ತು ಸೂರ್ಯಕುಮಾರ್ ಇಬ್ಬರನ್ನೂ ಆಡಿಸಿತ್ತು ಮತ್ತು ಶಾರ್ದೂಲ್ ಠಾಕೂರ್ರನ್ನೂ ಕೈಬಿಟ್ಟಿತ್ತು. ಹಾರ್ದಿಕ್ ಗೈರಿನಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಇಂಗ್ಲೆಂಡ್ ವಿರುದ್ಧವೂ ಸೂರ್ಯಕುಮಾರ್ರನ್ನು ಆಡಿಸಬಹುದು. ಆಗ ಅಶ್ವಿನ್ಗೆ 3ನೇ ವೇಗದ ಬೌಲರ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಇಂಗ್ಲೆಂಡ್ ತಂಡ ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ರಂಥ ಎಡಗೈ ಆಟಗಾರರನ್ನು ಹೊಂದಿರುವುದರಿಂದಲೂ ಅಶ್ವಿನ್ ಆಯ್ಕೆ ನಿರೀಕ್ಷೆ ಹೆಚ್ಚಿದೆ.
ಹಾರ್ದಿಕ್ ಗೈರಿನಲ್ಲಿ 6ನೇ ಬೌಲರ್ ಕೊರತೆ ಕಾಡುವ ಅಪಾಯವನ್ನು ತಪ್ಪಿಸಲು ವಿರಾಟ್ ಕೊಹ್ಲಿ ಮತ್ತು ಶುಭಮಾನ್ ಗಿಲ್ರನ್ನು ಅರೆಕಾಲಿಕ ಬೌಲರ್ಗಳಾಗಿ ಬಳಸುವ ಸಾಧ್ಯತೆಯೂ ಕಾಣಿಸಿದೆ. ಅವರಿಬ್ಬರು ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದು ಈ ಸುಳಿವು ನೀಡಿದೆ. ಐವರು ಪ್ರಮುಖ ಬೌಲರ್ಗಳಲ್ಲಿ ಯಾರಿಗಾದರೂ ಕೆಟ್ಟ ದಿನ ಕಾಡಿದರೆ ಆಗ ಅರೆಕಾಲಿಕ ಬೌಲರ್ಗಳಾದರೂ ಉಪಯುಕ್ತರೆನಿಸಬಹುದು.