ಕ್ರೀಡೆ

ಅಶ್ವಿನ್ ಏಕದಿನ, ಟಿ20 ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ: ಯುವರಾಜ್ ಸಿಂಗ್ ಅಚ್ಚರಿ ಹೇಳಿಕೆ!

ನವದೆಹಲಿ: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಬ್ಬ ಶ್ರೇಷ್ಠ ಬೌಲರ್, ಆದರೆ, ಆತ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಸ್ಥಾನ ಪಡೆಯಲು ಅರ್ಹ ಎಂದು ನಾನು ಭಾವಿಸುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅಶ್ವಿನ್ ಒಬ್ಬ ವಿಶ್ವ ದರ್ಜೆಯ ಸ್ಪಿನ್ನರ್ ಎಂಬುದರಲ್ಲಿ ಅನುಮಾನವಿಲ್ಲ, ಆತ ವೈಟ್-ಬಾಲ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ. ಏಕದಿನ ಮತ್ತು ಟಿ20 ಕ್ರಿಕೆಟ್​​ ಸೆಟಪ್​ಗೆ ಹೊಂದಿಕೊಳ್ಳಲ್ಲ. ಬ್ಯಾಟಿಂಗ್​​ನಲ್ಲಿ ಕಾಣಿಕೆ ನೀಡದ ಕಾರಣ ಸೀಮಿತ ಓವರ್​​ಗಳ ಕ್ರಿಕೆಟ್​ಗೆ ಅರ್ಹರೆಂದು ಭಾವಿಸುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ

ಅಶ್ವಿನ್ ಬೌಲಿಂಗ್​​ನಲ್ಲಿ ಮ್ಯಾಜಿಕ್ ನಡೆಸುತ್ತಾರೆ. ಅದ್ಭುತ ಬೌಲಿಂಗ್​ ಮೂಲಕ ಪಂದ್ಯದ ಚಿತ್ರಣ ಬದಲಿಸುತ್ತಾರೆ. ಆದರೆ ಅವರು ಬ್ಯಾಟ್​ ಮತ್ತು ಫೀಲ್ಡಿಂಗ್​ನೊಂದಿಗೆ ಏನು ಕೊಡುಗೆ ನೀಡುತ್ತಾರೆ? ಅವರಿಂದ ಈ ಎರಡೂ ವಿಭಾಗಗಳಲ್ಲಿ ನಿರೀಕ್ಷೆಗೆ ತಕ್ಕಂತೆ ನ್ಯಾಯ ಸಿಗುವುದಿಲ್ಲ ಎಂದು ಯುವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭವಿಷ್ಯದ ನಾಯಕನನ್ನು ರೂಪಿಸಬೇಕು: ಇದೇ ವೇಳೆ ಭವಿಷ್ಯದ ನಾಯಕನನ್ನು ರೂಪಿಸಬೇಕು ಎಂದು ತಿಳಿಸಿದ ಯುವಿ, ಶುಭ್ಮನ್ ಗಿಲ್​ಗೆ ಬೆಂಬಲ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ವೈಟ್-ಬಾಲ್ ತಂಡವನ್ನು ದೀರ್ಘಾವಧಿವರೆಗೂ ಮುನ್ನಡೆಸಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾರ್ದಿಕ್ ಪಾದದ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಗಾಯದಿಂದ ಬಳಲುತ್ತಿರುವ ಕಾರಣ ಸೂರ್ಯಕುಮಾರ್ ಯಾದವ್ ಮತ್ತು ಶುಭ್ಮನ್ ಗಿಲ್ ಅವರಂತಹ ಆಟಗಾರರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಬೇಕು ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.