ಕ್ರೀಡೆ

ಅಹರ್ನಿಶಿ ಟೆಸ್ಟ್‌ನಲ್ಲಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ ಅಶ್ವಿನ್

ಅಹಮದಾಬಾದ್: ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಎರಡೇ ದಿನಗಳಲ್ಲಿ ಗೆದ್ದುಕೊಂಡ ನಡುವೆ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ವೃತ್ತಿಜೀವನದ ಹಲವು ಮೈಲಿಗಲ್ಲುಗಳನ್ನು ನೆಟ್ಟರು. ತಮಿಳುನಾಡಿನ 34 ವರ್ಷದ ಆರ್.ಅಶ್ವಿನ್ ಗುರುವಾರದ 2ನೇ ದಿನದಾಟದಲ್ಲಿ 4 ವಿಕೆಟ್ ಕಬಳಿಸಿದರು. ಈ ವೇಳೆ ಎರಡು ಪ್ರಮುಖ ಮೈಲುಗಲ್ಲು ಸ್ಥಾಪಿಸಿದರು.

ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಕಬಳಿಸಿದ ಭಾರತದ 4ನೇ ಹಾಗೂ ವಿಶ್ವದ 16ನೇ ಬೌಲರ್ ಎನಿಸಿಕೊಂಡರು. ಜತೆಗೆ 400 ವಿಕೆಟ್ ಕಬಳಿಸಿದ ಭಾರತದ ಅತಿವೇಗದ ಸಾಧಕ ಹಾಗೂ ವಿಶ್ವದ 2ನೇ ಅತಿವೇಗದ ಸಾಧಕ ಅಶ್ವಿನ್ 77ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರೆ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 72 ಟೆಸ್ಟ್‌ಗಳಲ್ಲಿ 400 ವಿಕೆಟ್ ಕಬಳಿಸಿದ್ದರು. ಕನ್ನಡಿಗ ಅನಿಲ್ ಕುಂಬ್ಳೆ (619), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417) 400 ವಿಕೆಟ್ ಕಬಳಿಸಿದ ಭಾರತದ ಇತರ ಬೌಲರ್‌ಗಳು.

ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಒಡೆಯನಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ 400, ಏಕದಿನ ಕ್ರಿಕೆಟ್‌ನಲ್ಲಿ 150, ಟಿ20 ಕ್ರಿಕೆಟ್‌ನಲ್ಲಿ 52 ವಿಕೆಟ್ ಕಬಳಿಸಿದ್ದಾರೆ. ಅವರು ಈ ಸಾಧನೆ ಮಾಡಿದ 5ನೇ ಭಾರತೀಯ ಬೌಲರ್. ಅನಿಲ್ ಕುಂಬ್ಳೆ (956), ಹರ್ಭಜನ್ (711), ಕಪಿಲ್ ದೇವ್ (687) ಮತ್ತು ಜಹೀರ್ ಖಾನ್ (610) ಹಿಂದಿನ ಸಾಧಕರು. ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಅತಿ ಹೆಚ್ಚು ಬಾರಿ ಅಂದರೆ 11 ಬಾರಿ ಬಲಿ ಪಡೆದ ಸಾಧನೆಯನ್ನೂ ಮಾಡಿದರು. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (10), ಅಲಸ್ಟೈರ್ ಕುಕ್ (9) ಇದ್ದಾರೆ.