ಕ್ರೀಡೆ

ಸಬಲೆಂಕಾ ಸತತ 2ನೇ ಸಲ ಮೆಲ್ಬೋರ್ನ್​ ರಾಣಿ; ಆಸ್ಟ್ರೇಲಿಯನ್​ ಓಪನ್​ನಲ್ಲಿ ಹೊಸ ದಾಖಲೆ...

ಮೆಲ್ಬೋರ್ನ್​: ಬೆಲಾರಸ್​ ತಾರೆ ಅರಿನಾ ಸಬಲೆಂಕಾ ಆಸ್ಟ್ರೆಲಿಯನ್​ ಓಪನ್​ ಟೆನಿಸ್​ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. 2ನೇ ಶ್ರೇಯಾಂಕಿತೆ ಸಬಲೆಂಕಾ ಫೈನಲ್​ ಪಂದ್ಯದಲ್ಲಿ ಚೀನಾದ ಯುವ ಆಟಗಾರ್ತಿ ಕ್ವಿನ್​ವೆನ್​ ಝೆಂಗ್​ ಎದುರು ನೇರಸೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದರು. ಇದು ಸಬಲೆಂಕಾಗೆ ವೃತ್ತೀಜಿವನದ 2ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.

ಮೆಲ್ಬೋರ್ನ್​ ಪಾರ್ಕ್​ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ 25 ವರ್ಷದ ಸಬಲೆಂಕಾ 6-3, 6-2ರಿಂದ ಜಯ ಸಾಧಿಸಿದರು. ತನ್ನದೇ ದೇಶದ ವಿಕ್ಟೋರಿಯಾ ಅಜರೆಂಕಾ ಬಳಿಕ ಸತತ 2 ಬಾರಿ ಆಸ್ಟ್ರೆಲಿಯನ್​ ಓಪನ್​ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಸಬಲೆಂಕಾ ಅವರದಾಗಿದೆ. ಅಜರೆಂಕಾ 2012-2013ರಲ್ಲಿ ಈ ಸಾಧನೆ ಮಾಡಿದ್ದರು. ಅಲ್ಲದೆ ಅಜರೆಂಕಾ ಬಳಿಕ ವೃತ್ತೀಜಿವನದ ಮೊದಲ 2 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳನ್ನು ಮೆಲ್ಬೋರ್ನ್​ನಲ್ಲೇ ಗೆದ್ದ ಮೊದಲ ಆಟಗಾರ್ತಿಯೂ ಆಗಿದ್ದಾರೆ.

21 ವರ್ಷದ ಝೆಂಗ್​, ನಾ ಲೀ ಬಳಿಕ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆದ್ದ ಚೀನಾದ 2ನೇ ಆಟಗಾರ್ತಿ ಎನಿಸುವ ಪ್ರಯತ್ನದಲ್ಲಿ ಎಡವಿದರು. ಆದರೆ ನಾ ಲೀ ಬಳಿಕ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಚೀನಾ ಆಟಗಾರ್ತಿ ಎನಿಸಿದ್ದಾರೆ. ಟೂರ್ನಿಯಲ್ಲಿ ಸರ್ವಾಧಿಕ 54 ಏಸ್​ ಸಿಡಿಸಿದ ಸಾಧನೆಯೂ ಝೆಂಗ್​ ಅವರದಾಗಿದೆ.

ಸೆಟ್​ ಸೋಲದೆ ಚಾಂಪಿಯನ್​

ಸಬಲೆಂಕಾ ಕಳೆದ 3 ವರ್ಷಗಳಲ್ಲಿ ಟೂರ್ನಿಯುದ್ದಕ್ಕೂ ಒಂದೂ ಸೆಟ್​ ಸೋಲದೆ ಆಸ್ಟ್ರೆಲಿಯನ್​ ಓಪನ್​ ಪ್ರಶಸ್ತಿ ಗೆದ್ದ 2ನೇ ಆಟಗಾರ್ತಿ ಎನಿಸಿದ್ದಾರೆ. 2022ರಲ್ಲಿ ಆಶ್ಲೆ ಬಾರ್ಟಿ ಕೂಡ ಈ ಸಾಧನೆ ಮಾಡಿದ್ದರು.

ಸಬಲೆಂಕಾ ಮುಕ್ತ ಟೆನಿಸ್​ ಯುಗದಲ್ಲಿ ಸತತ 2 ಬಾರಿ ಆಸ್ಟ್ರೆಲಿಯನ್​ ಓಪನ್​ ಗೆದ್ದ 9ನೇ ಆಟಗಾರ್ತಿಯಾಗಿದ್ದಾರೆ. ಮಾರ್ಗರೇಟ್​ ಕೋರ್ಟ್​, ಗೂಲಗೊಂಗ್​, ಸ್ಟೆಫಿಗ್ರಾಫ್​, ಮೋನಿಕಾ ಸೆಲೆಸ್​, ಮಾರ್ಟಿನಾ ಹಿಂಗಿಸ್​, ಜೆನ್ನಿರ್​ ಕ್ಯಾಪ್ರಿಯಾಟಿ, ಸೆರೇನಾ ವಿಲಿಯಮ್ಸ್​ ಮತ್ತು ಅಜರೆಂಕಾ ಹಿಂದಿನ ಸಾಧಕಿಯರು.