ಹಾಂಗ್ಝೌ: ಎರಡೂ ಕೈಗಳಿಲ್ಲದ ನಡುವೆಯೂ ಕಾಲಿನಿಂದಲೇ ಬಿಲ್ಲು-ಬಾಣಗಳನ್ನು ಹಿಡಿದು ಗುರಿಯಿಡುವ 16 ವರ್ಷದ ಬಿಲ್ಗಾರ್ತಿ ಶೀತಲ್ ದೇವಿ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅವರು ಏಷ್ಯನ್ ಪ್ಯಾರಾ ಗೇಮ್ಸ್ ಆವೃತ್ತಿಯೊಂದರಲ್ಲಿ 2 ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.
ಜಮ್ಮು-ಕಾಶ್ಮೀರದ ಶೀತಲ್ ಒಂದು ಬೆಳ್ಳಿ ಪದಕವನ್ನೂ ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಕಂಪೌಂಡ್ ಆರ್ಚರಿ ಸ್ಪರ್ಧೆಯ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಶೀತಲ್ ದೇವಿ, ಚಿನ್ನಕ್ಕೆ ಗುರಿಯಿಟ್ಟರು. ಭಾರತೀಯ ಸೇನೆಯಿಂದ ದತ್ತು ಸ್ವೀಕರಿಸಲ್ಪಟ್ಟು ಮಿಲಿಟರಿ ಶಿಬಿರದಲ್ಲೇ ಬೆಳೆದಿರುವ ಶೀತಲ್, ಚಿನ್ನದ ಪದಕದ ಹೋರಾಟದಲ್ಲಿ ಸಿಂಗಾಪುರದ ಅಲಿಮ್ ನುರ್ ಸೈಹಿದಾ ಎದುರು 144-142ರಿಂದ ರೋಚಕ ಗೆಲುವು ಸಾಧಿಸಿದರು.
ಈ ಮುನ್ನ ಗುರುವಾರವಷ್ಟೇ ಮಿಶ್ರ ತಂಡ ವಿಭಾಗದಲ್ಲಿ ರಾಕೇಶ್ ಕುಮಾರ್ ಜತೆಗೆ ಚಿನ್ನ ಗೆದ್ದಿದ್ದ ಅವರು, ಬುಧವಾರ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸರಿತಾ ಜತೆ ಬೆಳ್ಳಿಗೆ ಕೊರಳೊಡ್ಡಿದ್ದರು.