ಮುಂಬೈ: ತುಂಬು ಗರ್ಭಿಣಿಯಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಅದರ ನಡುವೆಯೂ ಶೂಟಿಂಗ್ಗಳಲ್ಲಿ ಭಾಗವಹಿಸಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಪ್ಪಿಕೊಂಡ ಒಂದಷ್ಟು ಕಮಿಟ್ಮೆಂಟ್ಗಳನ್ನು ಮಗು ಆಗುವ ಮುನ್ನವೇ ಮುಗಿಸಿಕೊಡುವ ದಾವಂತದಲ್ಲಿದ್ದಾರೆ. ಈ ನಡುವೆ ಆರೋಗ್ಯಕ್ಕೂ ಅಷ್ಟೇ ಸಮಯ ನೀಡುತ್ತಿದ್ದಾರೆ. ಇದೀಗ ಅವರ ಯೋಗಾಸನದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ದ್ವಿಪಾತ್ರಗಳಲ್ಲಿ ರವಿಚಂದ್ರನ್
ಶಿರ್ಶಾಸನ ಮಾಡುವ ಭಂಗಿಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಅನುಷ್ಕಾ ಶರ್ಮಾ, ಯೋಗದ ಬಗ್ಗೆ ಒಂದಷ್ಟು ಅಂಶಗಳನ್ನು ಬರೆದುಕೊಂಡಿದ್ದಾರೆ. ‘ಯೋಗವು ನನ್ನ ಜೀವನದ ಒಂದು ದೊಡ್ಡ ಭಾಗವಾಗಿರುವುದರಿಂದ, ನಾನು ಗರ್ಭಿಣಿಯಾಗುವುದಕ್ಕಿಂತ ಮೊದಲು ಒಂದಷ್ಟು ಆಸನಗಳನ್ನು ಹೊರತುಪಡಿಸಿ ಎಲ್ಲಾ ಆಸನಗಳನ್ನು ನಾನು ಮಾಡಬಹುದೆಂದು ನನ್ನ ವೈದ್ಯರು ಶಿಫಾರಸು ಮಾಡಿದ್ದರು. ಅದೇ ರೀತಿ ನಾನು ಅನೇಕ ವರ್ಷಗಳಿಂದ ಮಾಡುತ್ತಿರುವ ಶಿರ್ಶಾಸನವನ್ನು ಈ ಸಲ ಗೋಡೆಯನ್ನು ಬಳಸಿದ್ದೇನೆ’ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲ ಈ ಯೋಗಾಸನ ಅನುಷ್ಕಾ ಅವರ ಯೋಗ ಶಿಕ್ಷಕಿ ಅವರ ನೇತೃತ್ವದಲ್ಲಿಯೇ ವರ್ಚುವಲ್ ಆಗಿಯೇ ನಡೆದಿದೆ. ಈ ರೀತಿಯ ಯೋಗಾಸನ ಮಾಡುವುದು ನನ್ನಿಷ್ಟದ ಕೆಲಸಗಳಲ್ಲೊಂದು ಎಂದೂ ಅನುಷ್ಕಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಫೋಟೋ ಕೆಲ ದಿನಗಳ ಹಿಂದೆಯೇ ಕ್ಲಿಕ್ಕಿಸಿದ್ದು. ಸದ್ಯ ವಿರಾಟ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. (ಏಜೆನ್ಸೀಸ್)