ಪುಣೆ: ಕಳೆದ ವರ್ಷ ನಡೆದ ರಣಜಿ ಟ್ರೋಫಿ ಮೊದಲ ಚರಣದ ಪಂದ್ಯದಲ್ಲಿ ಅಂಪೈರ್ ಔಟ್ ತೀರ್ಪು ನೀಡಿದರೂ, ಮೈದಾನ ತ್ಯಜಿಸಲು ನಿರಾಕರಿಸಿದ್ದ ಮಹಾರಾಷ್ಟ್ರ ಬ್ಯಾಟರ್ ಅಂಕಿತ್ ಬಾವ್ನೆಗೆ ಬಿಸಿಸಿಐ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದೆ. ಇದರಿಂದಾಗಿ ಬಾವ್ನೆ ನಾಸಿಕ್ನಲ್ಲಿ ಗುರುವಾರ ಆರಂಭಗೊಂಡ ಬರೋಡ ವಿರುದ್ಧದ ರಣಜಿ ಟ್ರೋಫಿ 2ನೇ ಚರಣದ ಪಂದ್ಯಕ್ಕೆ ಮಹಾರಾಷ್ಟ್ರ ತಂಡದಿಂದ ಹೊರಗುಳಿದಿದ್ದಾರೆ.
ಕಳೆದ ವರ್ಷ ಎಂಸಿಎ ಗ್ರೌಂಡ್ನಲ್ಲಿ ನಡೆದ ಪಂದ್ಯದ ವೇಳೆ ಎದುರಾಳಿ ಸರ್ವೀಸಸ್ ತಂಡದ ಎಡಗೈ ಸ್ಪಿನ್ನರ್ ಅಮಿತ್ ಶುಕ್ಲಾ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಶುಭಂ ರೋಹಿಲ್ಲಾ ಕ್ಯಾಚ್ ಹಿಡಿದಾಗ ಅಂಪೈರ್ ಔಟ್ ತೀರ್ಪು ನೀಡಿದ್ದರು. ಆದರೆ ರೋಹಿಲ್ಲಾ ಕ್ಯಾಚ್ ಹಿಡಿಯುವ ಮುನ್ನ ಚೆಂಡು ನೆಲಕ್ಕೆ ಬಿದ್ದಿತ್ತು ಎಂದು ಬಾವ್ನೆ ವಾದಿಸಿದ್ದರು. ಡಿಆರ್ಎಸ್ ಲಭ್ಯವಿಲ್ಲದ ಕಾರಣ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿಲ್ಲ. ಆಗ ಮೈದಾನ ತೊರೆಯಲು ನಿರಾಕರಿಸಿದ್ದ ಬಾವ್ನೆ ಸುಮಾರು 15 ನಿಮಿಷಗಳ ಕಾಲ ಆಟ ಸ್ಥಗಿತಗೊಳ್ಳಲು ಕಾರಣರಾಗಿದ್ದರು. ಮ್ಯಾಚ್ ರೆಫ್ರಿ ಅಮಿತ್ ಶರ್ಮ ಮತ್ತು ಮಹಾರಾಷ್ಟ್ರ ಕೋಚ್ ಸುಲಕ್ಷಣ್ ಕುಲಕರ್ಣಿ ಮಧ್ಯಪ್ರವೇಶದ ಬಳಿಕ ಕೊನೆಗೂ ಬಾವ್ನೆ ಪೆವಿಲಿಯನ್ಗೆ ಮರಳಿದಾಗ ಆಟ ಮುಂದುವರಿದಿತ್ತು.
ಭಾರತ ಎ ತಂಡದೊಂದಿಗೆ ಆಸೀಸ್ ಪ್ರವಾಸದಲ್ಲಿದ್ದ ಮಹಾರಾಷ್ಟ್ರ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ವಿವಾದಾತ್ಮಕ ಕ್ಯಾಚ್ಅನ್ನು ಪ್ರಶ್ನಿಸಿ ಬಾವ್ನೆ ಪರ ನಿಂತಿದ್ದರು.