ಲಂಡನ್: ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 600 ವಿಕೆಟ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿರುವ ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ ಇದೀಗ ಮುಂದಿನ ವರ್ಷದ ಭಾರತ ಪ್ರವಾಸವನ್ನು ಎದುರು ನೋಡುತ್ತಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕಠಿಣ ಸವಾಲೊಡ್ಡುವ ಹಂಬಲದಲ್ಲಿದ್ದಾರೆ.
'ಕೊಹ್ಲಿ ಅವರಂಥ ದರ್ಜೆಯ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡುವುದು ಯಾವಾಗಲೂ ಕಠಿಣ. ಇದೊಂದು ಕಠಿಣ ಸಮರವಾಗಿರಲಿದೆ. ಆದರೆ ನಾನಿದನ್ನು ಆನಂದಿಸುತ್ತೇನೆ. ವಿಶ್ವದ ಅತ್ಯುತ್ತಮ ಆಟಗಾರರನ್ನು ಔಟ್ ಮಾಡುವ ಹಂಬಲ ಎಲ್ಲರಲ್ಲೂ ಇರುತ್ತದೆ' ಎಂದು 38 ವರ್ಷದ ಆಂಡರ್ಸನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಮುನ್ನ 2014ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಆಂಡರ್ಸನ್, ಕೊಹ್ಲಿ ಅವರನ್ನು 4 ಬಾರಿ ಔಟ್ ಮಾಡಿ ಮೇಲುಗೈ ಸಾಧಿಸಿದ್ದರು. ಆ ಸರಣಿಯ 10 ಇನಿಂಗ್ಸ್ಗಳಲ್ಲಿ ಕೊಹ್ಲಿ ಕೇವಲ 134 ರನ್ ಗಳಿಸಿ ವೈಫಲ್ಯ ಕಂಡಿದ್ದರು.
ಆದರೆ ಬಳಿಕ 2018ರಲ್ಲಿ ವಿರಾಟ್ ಕೊಹ್ಲಿ ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಂಡರ್ಸನ್ಗೆ ತಿರುಗೇಟು ನೀಡಿದ್ದರು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ಅತ್ಯಧಿಕ 593 ರನ್ ಸಿಡಿಸಿ ಗಮನ ಸೆಳೆದಿದ್ದರು. ಇದರಲ್ಲಿ 2 ಶತಕ ಮತ್ತು 3 ಅರ್ಧಶತಕಗಳು ಸೇರಿದ್ದವು.
'ನಾನು 2014ರಲ್ಲಿ ಕೊಹ್ಲಿ ವಿರುದ್ಧ ಯಶಸ್ಸು ಕಂಡಿದ್ದೆ. ಆದರೆ 2018ರಲ್ಲಿ ಅವರು ನಮ್ಮಲ್ಲಿಗೆ ಬಂದಾಗ ಸಂಪೂರ್ಣ ಭಿನ್ನ ಆಟಗಾರರಾಗಿದ್ದರು. ಆಗ ಅವರು ಅಮೋಘ ಫಾರ್ಮ್ನಲ್ಲಿದ್ದರು. ಆಗ ಅವರು ಚೆಂಡನ್ನು ಬಿಡುವುದನ್ನು ಉತ್ತಮವಾಗಿ ಕಲಿತಿದ್ದರು. 2014ರಲ್ಲಿ ಅವರು ನಾನು ಔಟ್ ಸ್ವಿಂಗರ್ ಎಸೆದಾಗ ಅದನ್ನು ಬಾರಿಸಲು ಹೋಗಿ ಸ್ಲಿಪ್ನಲ್ಲಿ ಕ್ಯಾಚ್ ನೀಡುತ್ತಿದ್ದರು. ಆದರೆ 2018ರಲ್ಲಿ ಅವರು ಹೆಚ್ಚು ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದರು' ಎಂದು 156 ಟೆಸ್ಟ್ ಪಂದ್ಯಗಳ ಅನುಭವಿ ಆಂಡರ್ಸನ್ ಹೇಳಿದ್ದಾರೆ.