ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಗುರುಗಳಾಗಿದ್ದ ಜಸ್ಪಾಲ್ ರಾಣಾ 
ಕ್ರೀಡೆ

ಶೂಟಿಂಗ್ ಜಗತ್ತಿಗೆ ತುಂಬಲಾರದ ನಷ್ಟ: ಖ್ಯಾತ ಕೋಚ್ ಜಸ್ಪಾಲ್ ರಾಣಾ ನಿಧನ; ಶಿಷ್ಯೆ ಮನು ಭಾಕರ್ ಕಣ್ಣೀರು! Manu Bhaker on Jaspal Rana

ಪ್ರಮುಖ ಮುಖ್ಯಾಂಶಗಳು

  • ಭಾರತದ ಖ್ಯಾತ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಜಸ್ಪಾಲ್ ರಾಣಾ (49) ನಿಧನ
  • ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಗುರುಗಳಾಗಿದ್ದ ಜಸ್ಪಾಲ್ ರಾಣಾ
  • ಗುರುಗಳ ಸಾವಿಗೆ ಶಿಷ್ಯೆ ಭಾವುಕ ನುಡಿ ನಮನ
ಡೆಹರ್ರಾಡೂನ್​: ಭಾರತದ ಖ್ಯಾತ ಶೂಟರ್​, ಏಷ್ಯನ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಹಾಗೂ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದ ಜಸ್ಪಾಲ್ ರಾಣಾ ತಮ್ಮ 49 ನೇ ವಯಸ್ಸಿನಲ್ಲಿ ಶುಕ್ರವಾರ (ಜೂ.12) ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಿಧನರಾದ ಜಸ್ಪಾಲ್ ರಾಣಾ, ಡಬಲ್​ ಒಲಂಪಿಕ್​ ಪದಕ ವಿಜೇತೆ ಶೂಟರ್​ ಮನು ಭಾಕರ್ (Manu Bhaker on Jaspal Rana)​ ಅವರ ತರಬೇತುಗಾರರಾಗಿದ್ದು, ತನ್ನ ಗುರುವಿನ ಸಾವಿಗೆ ಶಿಷ್ಯೆ ಕಂಬಿನಿ ಮಿಡಿದಿದ್ದಾಳೆ.

ತುಂಬಲಾಗದ ನಷ್ಟ!

ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಸಂದರ್ಭದಲ್ಲಿ ಎದೆನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದ್ದ ರಾಣಾ, ಭಾರತಕ್ಕೆ ಹಿಂದಿರುಗುವಾಗ ವಿಮಾನದಲ್ಲೂ ಅದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದೆಹಲಿಗೆ ಬಂದಿಳಿದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿಧಿಯಾಟಕ್ಕೆ ಕೋಚ್​ ಕೊನೆಯಾಗಿದ್ದಾರೆ.
ತನ್ನ ಗುರುಗಳ ಸಾವಿಗೆ ಪ್ರತಿಕ್ರಿಯಿಸಿರುವ ಮನು, ಇದು ಶೂಟಿಂಗ್​ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಟೊಕಿಯೋ ಒಲಂಪಿಕ್ಸ್​ನಲ್ಲಿ ಮನು ಸೋತು ಹತಾಶಳಾದಾಗ ಜಸ್ಪಾಲ್ ರಾಣಾ ನೀಡಿದ ಮಾರ್ಗದರ್ಶನ ಮತ್ತು ತರಬೇತಿಯಿಂದಾಗಿ 2024 ರಲ್ಲಿ ನಡೆದ ಪ್ಯಾರಿಸ್​ ಒಲಂಪಿಕ್ಸ್​ನಲ್ಲಿ ಎರಡು ಪದಗಳನ್ನು ಗೆಲ್ಲುವಂತಾಯಿತೆಂದು ಭಾಕರ್​ ಹೇಳಿದ್ದಾರೆ.
ಯಾರು ಈ ಜಸ್ಪಾಲ್ ರಾಣಾ?
ಜಸ್ಪಾಲ್ ರಾಣಾ ಭಾರತದ ಶೂಟಿಂಗ್ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. 1976 ರಲ್ಲಿ ಉತ್ತರಾಖಂಡದಲ್ಲಿ ಜನಿಸಿದ ಇವರು, ಪ್ರಮುಖವಾಗಿ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ದೇಶಕ್ಕೆ ಅಪಾರ ಕೀರ್ತಿ ತಂದುಕೊಟ್ಟಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ, ಹಿರೋಷಿಮಾ ಏಷ್ಯನ್ ಗೇಮ್ಸ್‌(1994)ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಗಮನ ಸೆಳೆದರು.
ಆ ಬಳಿಕ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಸರಣಿ ಚಿನ್ನದ ಪದಕಗಳನ್ನು ಬೇಟೆಯಾಡಿದ ಜಸ್ಪಾಲ್ ರಾಣಾ, ಭಾರತೀಯ ಶೂಟಿಂಗ್ ಕ್ಷೇತ್ರಕ್ಕೆ ಹೊಸ ದಾರಿಯನ್ನೇ ತೋರಿಸಿಕೊಟ್ಟರು. ಇವರ ಈ ಅದ್ಭುತ ಕ್ರೀಡಾ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ ಅತ್ಯುನ್ನತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
ಕ್ರೀಡಾಪಟುವಾಗಿ ನಿವೃತ್ತರಾದ ಮೇಲೂ ಜಸ್ಪಾಲ್ ರಾಣಾ ಅವರು ಶೂಟಿಂಗ್ ಕ್ಷೇತ್ರದಿಂದ ದೂರ ಸರಿಯಲಿಲ್ಲ, ಬದಲಿಗೆ ಒಬ್ಬ ಶ್ರೇಷ್ಠ ತರಬೇತುದಾರನಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಮನು ಭಾಕರ್ ಮತ್ತು ಸೌರಭ್ ಚೌಧರಿಯಂತಹ ಜಗತ್ಪ್ರಸಿದ್ಧ ಯುವ ಶೂಟರ್‌ಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಿದ ಕೀರ್ತಿ ರಾಣಾ ಅವರಿಗೆ ಸಲ್ಲುತ್ತದೆ. ಇವರ ಅಪ್ರತಿಮ ತರಬೇತಿ ಸೇವೆಯನ್ನು ಶ್ಲಾಘಿಸಿ ಭಾರತ ಸರ್ಕಾರ ಕ್ರೀಡಾ ತರಬೇತುದಾರರಿಗೆ ನೀಡುವ ಅತ್ಯುನ್ನತ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ, (ಏಜನ್ಸೀಸ್​).