ಕ್ರೀಡೆ

ಆತನನ್ನು ಆಲ್ರೌಂಡರ್​ ಎಂದು ಕರೆದರೆ...; ಟೀಮ್​ ಇಂಡಿಯಾ ಆಟಗಾರನ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಪಾಕ್​ ಮಾಜಿ ಕೋಚ್

ನವದೆಹಲಿ: ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್​ ತಂಡವು ಸೂಪರ್​ 08 ಹಂತವನ್ನು ಪ್ರವೇಶಿದೆ ಹೊರಬೀಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿತ್ತು. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನದ ಕ್ರಿಕೆಟ್​ ತಂಡದ ಮಾಜಿ ಆಟಗಾರರು ಹಾಗೂ ಕೋಚ್​ಗಳು ಭಾರತ ಮತ್ತು ತಂಡದ ಆಟಗಾರರ ವಿರುದ್ಧ ಹೇಳಿಕೆಗಳನ್ನು ನೀಡುತ್ತ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.

ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಕೋಚ್​ ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಕುರಿತು ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ದೇಶೀಯ ಕ್ರಿಕೆಟ್​ ತಂಡಗಳಾದ ಕೇರಳ ಹಾಗೂ ಬರೋಡಾಗೆ ತರಬೇತಿ ನೀಡಿರುವ ಡೇವ್ ವಾಟ್ಮೋರ್ ಹಾರ್ದಿಕ್​ ಕುರಿತು ಮಾತನಾಡಿದ್ದು, ಈ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ವಾಟ್ಮೋರ್, ನನ್ನ ಪ್ರಕಾರ ರಾಷ್ಟ್ರೀಯ ಕ್ರಿಕೆಟ್​ ತಂಡದ ಆರೋಗ್ಯವು ದೇಶೀಯ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ನಾನು ನೋಡಿದಂತೆ ಭಾರತದಲ್ಲಿ ನಾಲ್ಕು ಗುಂಪುಗಳಾಗಿ ಕ್ರಿಕೆಟ್​ ಆಡುವ ಸಾಕಷ್ಟು ತಂಡಗಳಿವೆ. ನಾನು ಹಲವಾರು ವರ್ಷಗಳ ಕಾಲ ಭಾರತದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದೇನೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾಗವಹಿಸುವ ತಂಡಗಳು ಉತ್ತಮವಾಗಿದ್ದು, ಐಪಿಎಲ್​ನಮತಹ ಟೂರ್ನಿಗಳಿಂದ ಉದಯೋನ್ಮುಖ ಆಟಗಾರರಿಗೆ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾಗಿದೆ.

ಟೀಮ್​ ಇಂಡಿಯಾದಲ್ಲಿ ವೈಟ್​ಬಾಲ್​ ಕ್ರಿಕೆಟ್​ ಆಡದೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವವರಿದ್ದಾರೆ. ಈ ಹಿಂದೆ ನಾನು ಬರೋಡಾ ತಂಡದ ಕೋಚ್​ ಆಗಿ ಕೆಲಸ ಮಾಡುತ್ತಿರುವಾಗ ಹಾರ್ದಿಕ್​ ಪಾಂಡ್ಯ ಎಂದಿಗೂ ಬರೋಡಾ ಪರ ವೈಟ್​ಬಾಲ್​ ಕ್ರಿಕೆಟ್​ ಆಡಿದ್ದನ್ನು ನಾನು ನೋಡಿಲ್ಲ. ಇದರ ಹೊರತಾಗಿಯೂ ಆತನನ್ನು ಬರೋಡಾದ ಆಲ್ರೌಂಡರ್​ ಎಂದು ಜನರು ಕರೆಯುವುದನ್ನು ನೋಡಿದರೆ ನನಗೆ ಮಜಾ ಕೊಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಪಟ ಆಡುವ ಆಟಗಾರರು ದೇಶೀಯ ಟೂರ್ನಿಗಳಲ್ಲಿ ಆಡಬೇಕೆಂದು ಬಿಸಿಸಿಐ ಹೊರಡಿಸುವ ಸೂಚನೆ ಒಳ್ಳೆಯ ನಿರ್ಧಾರವಾಗಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಡೇವ್ ವಾಟ್ಮೋರ್ ಹೇಳಿದ್ದಾರೆ.