2036ರ ಒಲಿಂಪಿಕ್ಸ್ ಆತಿಥ್ಯ: ಆಸಕ್ತಿ ತೋರಿದ ಭಾರತ ಸೇರಿ ಒಟ್ಟು ಏಳು ದೇಶಗಳ ಪಟ್ಟಿ ರಿವೀಲ್ | 2036 Olympics 
ಕ್ರೀಡೆ

2036ರ ಒಲಿಂಪಿಕ್ಸ್ ಆತಿಥ್ಯ: ಆಸಕ್ತಿ ತೋರಿದ ಭಾರತ ಸೇರಿ ಒಟ್ಟು 7 ದೇಶಗಳ ಫೈನಲ್​ ಪಟ್ಟಿ ರಿವೀಲ್ | 2036 Olympics

ನವದೆಹಲಿ: 2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಕನಸು ಇದೀಗ ಮತ್ತೊಂದು ಪ್ರಮುಖ ಹಂತ ತಲುಪಿದೆ. ಆತಿಥೇಯ ವಹಿಸಲು ಆಸಕ್ತಿ ತೋರಿರುವ ಒಟ್ಟು ಏಳು ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳ (NOC) ಅಧಿಕೃತ ಪಟ್ಟಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಕೊನೆಗೂ ರಿವೀಲ್ ಮಾಡಿದೆ.

ಆಸಕ್ತಿ ಅಭಿವ್ಯಕ್ತಿ ಸಲ್ಲಿಕೆಗೆ ನಿಗದಿಪಡಿಸಿದ್ದ ಗಡುವು ಮುಕ್ತಾಯಗೊಂಡ ಬಳಿಕ ಇನ್ಯಾವ ಹೊಸ ದೇಶಗಳು ಮುಂದೆ ಬರದ ಹಿನ್ನೆಲೆ ಐಒಸಿ ಈ ಅಂತಿಮ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದೆ. ಆತಿಥ್ಯ ವಹಿಸಿಕೊಳ್ಳುವ ರೇಸ್‌ನಲ್ಲಿ ಭಾರತ, ಜರ್ಮನಿ, ಹಂಗೇರಿ, ಕತಾರ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ದೇಶಗಳು ಪೈಪೋಟಿಗೆ ಮುಗಿಬಿದ್ದಿವೆ.

ಭಾರತೀಯ ಕ್ರೀಡಾ ಇತಿಹಾಸದಲ್ಲೇ ದೇಶವೊಂದು ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸುತ್ತಿರುವುದು ಇದೇ ಮೊದಲು. ಭಾರತವು ಈ ಹಿಂದೆ ನವದೆಹಲಿಯಲ್ಲಿ ನಡೆದ 2010ರ ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಪ್ರಮುಖ ಜಾಗತಿಕ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ ಅನುಭವ ಹೊಂದಿದ್ದೇ ಆದರೂ, ಒಲಿಂಪಿಕ್ಸ್‌ನಂತಹ ಜಾಗತಿಕ ಕ್ರೀಡಾ ಹಬ್ಬಕ್ಕೆ ಆತಿಥ್ಯ ವಹಿಸುವುದು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅತಿದೊಡ್ಡ ಮೈಲಿಗಲ್ಲಾಗಲಿದೆ.

ಆಯ್ಕೆ ಪ್ರಕ್ರಿಯೆ, ಮುಂದಿನ ಹಂತ ಹೇಗೆ?

ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಜೂನ್‌ನಲ್ಲಿ ನಡೆದ ಐಒಸಿ ಅಧಿವೇಶನದ ಅನುಮೋದನೆಯಂತೆ ಅಕ್ಟೋಬರ್ 6ರಂದು ಐಒಸಿ ಮೊದಲ ಬಾರಿಗೆ ಆಸಕ್ತ ದೇಶಗಳ ಹೆಸರುಗಳನ್ನು ಬಹಿರಂಗಪಡಿಸಿತ್ತು. ಆಯ್ಕೆ ಪ್ರಕ್ರಿಯೆಯ ಭಾಗವಾಗಿ, ಆತಿಥ್ಯದ ರೇಸ್‌ನಲ್ಲಿರುವ ಎಲ್ಲ ಏಳು ದೇಶಗಳು ನವೆಂಬರ್​ನಲ್ಲಿ ಐಒಸಿಯ 'ಫ್ಯೂಚರ್ ಹೋಸ್ಟ್ ಕಮಿಷನ್' ಮುಂದೆ ವರ್ಚುವಲ್ ಮೂಲಕ ತಮ್ಮ ಸಿದ್ಧತೆ ಮತ್ತು ಯೋಜನಾ ವರದಿಗಳ ಪ್ರಸ್ತುತ ಪಡಿಸಲಿವೆ.

ವರ್ಚುವಲ್ ಪ್ರಕ್ರಿಯೆ ನಂತರ, ಮಾರ್ಚ್ 2027ರ ವೇಳೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಈ ಎಲ್ಲಾ ಏಳು ದೇಶಗಳ ಮೂಲಸೌಕರ್ಯ ಹಾಗೂ ಸಿದ್ಧತೆಗಳ ಕುರಿತು ಕಾರ್ಯಸಾಧ್ಯತಾ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲಿದೆ. ಇದರ ಬೆನ್ನಲ್ಲೇ ಮುಂದಿನ ವರ್ಷ ಮಾರ್ಚ್​ನಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಎದುರಾಗಲಿದ್ದು, ಐಒಸಿ ಕಾರ್ಯಕಾರಿ ಮಂಡಳಿಯು 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ನಡೆಸಲಿದೆ. ಇದಾದ ಬಳಿಕವಷ್ಟೇ ಆತಿಥ್ಯ ವಹಿಸುವ ಅಂತಿಮ ನಗರ ಹಾಗೂ ದೇಶದ ಆಯ್ಕೆ ಪ್ರಕ್ರಿಯೆ ಮುಂದಿನ ಹಂತಕ್ಕೆ ಹೋಗಲಿದೆ,(ಏಜೆನ್ಸೀಸ್).