ಕ್ರೀಡೆ

ಭಾರತ ಮಹಿಳಾ ತಂಡದ ಹಿಂದಿರುವ ದೊಡ್ಡ ಶಕ್ತಿ ಇವರೇ ನೋಡಿ! ಕ್ರಿಕೆಟಿಗನಾಗಿ ಸೋತ್ರೂ ಛಲ ಬಿಡದ ಕೋಚ್​ | Amol Muzumdar

Amol Muzumdar: ಹಲವು ವರ್ಷಗಳಿಂದ ಕಾಯುತ್ತಿದ್ದ ಮಹಾದಾಸೆ ಕಡೆಗೂ ನಿನ್ನೆ (ನ.02) ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಈಡೇರಿತು. ಬಹುನಿರೀಕ್ಷಿತ ಟ್ರೋಫಿಯಾಗಿದ್ದ ಏಕದಿನ ವಿಶ್ವಕಪ್ ಅನ್ನು ಭಾರತೀಯ ಮಹಿಳಾ ತಂಡ ಗೆದ್ದು ಬೀಗಿದ್ದು ಇದೀಗ ಇತಿಹಾಸ. ಹರಿಣರನ್ನು 52 ರನ್‌ಗಳಿಂದ ಮಣಿಸಿದ ಹರ್ಮನ್​ಪ್ರೀತ್ ಕೌರ್​ ಪಡೆಯ ಸಂಭ್ರಮಕ್ಕೆ ಪಾರಾವೇ ಇಲ್ಲ. ಈ ಯಶಸ್ಸು, ಖುಷಿಯ ಹಿಂದೆ ಆಟಗಾರರ ಶ್ರಮ ಎಷ್ಟಿದೆಯೋ ಅದಕ್ಕೂ ಮೀರಿದ ಪರಿಶ್ರಮ ತಂಡದ ಕೋಚ್​ ಅವರದ್ದು.

'ಅನ್​ಸಂಗ್'​ ಹೀರೋ

ಭಾರತ ಮಹಿಳಾ ತಂಡವು ಈ ಐತಿಹಾಸಿಕ ವಿಜಯವನ್ನು ಸಾಧಿಸಿದ ಹಿಂದೆ, ತಂಡದ ಮುಖ್ಯ ಕೋಚ್ ಅಮೋಲ್ ಮುಜುಂದಾರ್ ಅವರ ನಿಸ್ವಾರ್ಥ ಪ್ರಯತ್ನ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಆರಂಭದಲ್ಲಿ ಕ್ರಿಕೆಟಿಗನಾಗಿ ಗುರುತಿಸಿಕೊಂಡ ಅಮೋಲ್​, ದೇಶೀಯ ಕ್ರಿಕೆಟ್‌ನಲ್ಲಿ 11,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇಷ್ಟಾದರೂ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಭಾರತದ ನೀಲಿ ಜೆರ್ಸಿಯನ್ನು ಧರಿಸಲು ಆಟಗಾರನಾಗಿ ಒಮ್ಮೆಯೂ ಅವಕಾಶ ಸಿಗಲಿಲ್ಲ. ಆದಾಗ್ಯೂ, ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಇಂದು ಮಹಿಳಾ ಭಾರತ ತಂಡವನ್ನು ವಿಶ್ವಕಪ್‌ ಕಿರೀಟಕ್ಕೆ ಮುತ್ತಿಡುವಂತೆ ಮಾಡಿದ್ದಾರೆ ಹಾಗೂ ಆ ಜೆರ್ಸಿಯನ್ನು ಧರಿಸಿದ್ದಾರೆ.

ರಾಮಕಾಂತ್ ಅಚ್ರೇಕರ್ ಅವರಿಂದ ತರಬೇತಿ

ಅಮೋಲ್ ಮುಜುಂದಾರ್ ಅವರನ್ನು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಮತ್ತು ಘನ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆರಂಭದಲ್ಲಿ ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಅವರ ಕೋಚ್ ರಾಮಕಾಂತ್ ಅಚ್ರೇಕರ್ ಅವರ ಬಳಿ ಅಮೋಲ್​ ತರಬೇತಿ ಪಡೆದಿದ್ದಾರೆ. ಅದಕ್ಕಾಗಿಯೇ ಅನೇಕರು ಇಂದಿಗೂ ಅವರನ್ನು ಜೂನಿಯರ್ ಸಚಿನ್ ಎಂದು ಕರೆಯುತ್ತಾರೆ. 1993-94ರ ರಣಜಿ ಟ್ರೋಫಿ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಅವರು ಇತಿಹಾಸ ಸೃಷ್ಟಿಸಿದರು.

ಮುಂಬೈ ಪರ ಆಡಿದ್ದ ಅಮೋಲ್, ಹರಿಯಾಣ ವಿರುದ್ಧದ ಪಂದ್ಯದಲ್ಲಿ 260 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ, ರಣಜಿ ಟ್ರೋಫಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಅವರು ಹೊಂದಿದ್ದಾರೆ. ಅವರ ಸುದೀರ್ಘ ವೃತ್ತಿಜೀವನದಲ್ಲಿ, ಮುಂಬೈ, ಅಸ್ಸಾಂ ಮತ್ತು ಆಂಧ್ರಪ್ರದೇಶವನ್ನು ಅಮೋಲ್​ ಪ್ರತಿನಿಧಿಸಿದ್ದಾರೆ. 171 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, 48.13ರ ಸರಾಸರಿಯಲ್ಲಿ 11,167 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಸೇರಿವೆ.

ಕೋಚ್ ಆಗಿ ವೃತ್ತಿಜೀವನ

2014ರಲ್ಲಿ ಕ್ರಿಕೆಟ್​ ಆಟಗಾರನಾಗಿ ನಿವೃತ್ತಿ ಪಡೆದ ಅಮೋಲ್​, ನಂತರದಲ್ಲಿ ಕೋಚ್​ ಆಗಿ ತಮ್ಮ ವೃತ್ತಿಜೀವನವನ್ನು ಆರಿಸಿಕೊಂಡರು. ಅಂಡರ್-19 ಮತ್ತು ಅಂಡರ್-23 ತಂಡಗಳಿಗೆ ಮಾರ್ಗದರ್ಶಕರಾಗಿ ಅವರು ಕೆಲಸ ಮಾಡಿದ್ದಾರೆ. 2018ರಿಂದ 2020 ರವರೆಗೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಬ್ಯಾಟಿಂಗ್ ಕೋಚ್ ಆಗಿಯೂ ಅಮೋಲ್​ ಕಾರ್ಯನಿರ್ವಹಿಸಿದ್ದಾರೆ.

ಅಕ್ಟೋಬರ್ 2023ರಲ್ಲಿ, ಬಿಸಿಸಿಐ ಅವರನ್ನು ಭಾರತೀಯ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಿಸಿತು. ಈ ಜವಾಬ್ದಾರಿಗಳನ್ನು ವಹಿಸಿಕೊಂಡ ಬೆನ್ನಲ್ಲೇ ಮುಜುಂದಾರ್ ಮಹಿಳಾ ತಂಡವನ್ನು ಅತ್ಯಂತ ಬಲಿಷ್ಠ ಹಾಗೂ ಸದೃಢವಾಗಿ ಮಾಡುವಲ್ಲಿ ಭಾರೀ ಶ್ರಮಿಸಿದ್ದಾರೆ. ಅದಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿಯೇ ಜ್ವಲಂತ ಸಾಕ್ಷಿ,(ಏಜೆನ್ಸೀಸ್).