ಜಪಾನ್: ಜಪಾನಿನ ಐಚಿ-ನಗೋಯಾನಲ್ಲಿ ನಡೆಯುತ್ತಿರುವ 5 ನೇ ಪಾರಾ ಏಷ್ಯನ್ ಕ್ರೀಡಾಕೂಟದಲ್ಲಿ, ಮೈದಾನದ ಹೊರಗೆ ನಡೆದಿರುವ ಘಟನೆಯೊಂದು ಭಾರೀ ವಿವಾದದ ರೂಪ ಪಡೆದುಕೊಂಡಿದೆ. ಭಾರತದ ಪಾರಾ ಈಜುಗಾರ (ಸ್ವಿಮ್ಮರ್) ಮೊಹಮ್ಮದ್ ಶಮ್ಸ್ ಆಲಂ ಶೇಖ್, ತಂಗಿದ್ದ ಹೋಟೆಲ್ನಲ್ಲಿ ಮಹಿಳೆಯೊಬ್ಬಳ ಜತೆಗೆ ಕೆಟ್ಟದಾಗಿ ನಡೆದುಕೊಂಡ ಹಿನ್ನಲೆ ಕ್ರೀಡಾಕೂಟದಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ವಿಶ್ವದ ಮಾಜಿ ನಂ. 1 ಈಜುಗಾರ (100 ಮೀ. ಬಟರ್ಫ್ಲೈ) ಮೊಹಮ್ಮದ್ ಶಮ್ಸ್ ಆಲಂ ಶೇಖ್, ತಾವು ತಂಗಿದ್ದ ಹೋಟೆಲ್, ನಿರ್ವಹಣಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಲು ಮುಂದಾಗಿದ್ದು, ಆಕೆ ಅಲ್ಲಿಂದ ಓಡಿ ಬಂದು ಸ್ಥಳೀಯ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಜಪಾನ್ ಪೊಲೀಸರು ಈ ಘಟನೆ ಬಗ್ಗೆ ಭಾರತ ತಂಡಕ್ಕೆ ಹಾಗೂ ಪಾರಾ ಏಷ್ಯನ್ ಗೇಮ್ಸ್ ಆಯೋಜಕರಿಗೆ ಮಾಹಿತಿ ನೀಡಿದ್ದು, ಆಲಂ ಶೇಖ್ ಅವರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಆಟಗಾರನ ಮೇಲೆ ಲೈಂಗಿಕ ಆರೋಪದ ದೂರು ಕೇಳಿ ಬರುತ್ತಿದ್ದಂತೆ, ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಪಾರಾ ಏಷ್ಯನ್ ಗೇಮ್ಸ್ ಆಯೋಜಕರು ಮೊಹಮ್ಮದ್ ಶಮ್ಸ್ ಆಲಂ ಶೇಖ್‌ನನ್ನು ಕ್ರೀಡಾಕೂಟದಿಂದ ಹೊರಹಾಕಲು ನಿರ್ಧರಿಸಿದ್ದಾರೆ.
ಇನ್ನು ಈ ಘಟನೆ ಜಾಗತಿಕವಾಗಿ ವಿವಾದವನ್ನು ಸೃಷ್ಟಿಸುತ್ತಲೇ ಎಚ್ಚೆತ್ತ ಭಾರತ ತಂಡವು ಹೋಟೆಲ್ ಸಿಬ್ಬಂದಿ, ವ್ಯವಸ್ಥಾಪಕರು ಹಾಗೂ ಏಷ್ಯನ್ ಗೇಮ್ಸ್ ಆಯೋಜಕರಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ಅಂತಯೇ ಈ ಕ್ರೀಡಾಪಟುವಿನ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಘಟನೆ ಪಾರಾ ಒಲಿಂಪಿಕ್ಸ್ ಕಮಿಟಿ ಮಟ್ಟದಲ್ಲಿ ಸದ್ದು ಮಾಡಿದ್ದು, ನಾವು ಕ್ರೀಡಾಪಟುಗಳಿಂದ ಇಂತಹ ವರ್ತನೆಯನ್ನು ಭಯಸುವುದಿಲ್ಲ. ಹಾಗೆಯೇ ಇಂತಹ ಆಟಗಾರರಿಗೆ ಮುಂದಿನ ದಿನಗಳಲ್ಲಿ ಅವಕಾಶವನ್ನು ಕೊಡುವುದಿಲ್ಲ. ಇವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದೇ ತಮ್ಮ ನಿಲುವಾಗಿದ್ದು, ಈ ವಿವಾದಿತ ಆಟಗಾರ, ಆತನ ದೇಶವನ್ನು ತಲುಪುತ್ತಲೇ, ಅವನನ್ನು ಪಾರಾ ಕ್ರೀಡಾಕೂಟದಿಂದ ಜೀವನಪರ್ಯಂತ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದಾಗಿ ಪಾರಾ ಒಲಿಂಪಿಕ್ ಕಮಿಟಿ ಮೂಲದಿಂದ ಮಾಹಿತಿ ಲಭ್ಯವಾಗಿದೆ, (ಏಜೆನ್ಸೀಸ್).