ಕ್ರೀಡೆ

ಡಬ್ಲ್ಯುಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಸತತ ಎರಡನೇ ಗೆಲುವು

ಬೆಂಗಳೂರು: ಅಮೆಲಿಯಾ ಕೆರ್​ (31 ರನ್​, 25 ಎಸೆತ, 3 ಬೌಂಡರಿ ಹಾಗೂ 14ಕ್ಕೆ 4 ವಿಕೆಟ್​) ಆಲ್ರೌಂಡ್​ ಆಟ ಹಾಗೂ ವೇಗಿ ಶಬ್ನಮ್​ ಇಸ್ಮಾಯಿಲ್​ (18ಕ್ಕೆ 3) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲುಪಿಎಲ್​) 2ನೇ ಆವೃತ್ತಿಯಲ್ಲಿ ಗುಜರಾತ್​ ಜೈಂಟ್ಸ್​ ವಿರುದ್ಧ 5 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಗುಜರಾತ್​ ಅಗ್ರ ಕ್ರಮಾಂಕದ ವೈಲ್ಯದಿಂದ 9 ವಿಕೆಟ್​ಗೆ 126 ರನ್​ ಪೇರಿಸಿತು. 8ನೇ ವಿಕೆಟ್​ಗೆ ಜತೆಯಾದ ಕ್ಯಾಥರಿನ್​ ಬೆಸ್​ (25*) ಹಾಗೂ ತನುಜಾ ಕನ್ವರ್​ (28) ಜೋಡಿ 36 ಎಸೆತದಲ್ಲಿ 48 ರನ್​ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಕನ್ನಡತಿ, ಅನುಭವಿ ಬ್ಯಾಟರ್​ ವೇದಾ ಕೃಷ್ಣಮೂರ್ತಿ (0) ಪದಾರ್ಪಣೆಯ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಪ್ರತಿಯಾಗಿ ಮುಂಬೈ, 18.1 ಓವರ್​ಗಳಲ್ಲಿ 5 ವಿಕೆಟ್​ಗೆ 129 ರನ್​ಗಳಿಸಿ ಸತತ 2ನೇ ಜಯದ ಸಂಭ್ರಮ ಕಂಡಿತು.

ಗುಜರಾತ್​ ಜೈಂಟ್ಸ್​: 9 ವಿಕೆಟ್​ಗೆ 126 (ವೇದಾ 0, ಮೂನಿ 24, ಹರ್ಲೀನ್​ 4, ಲಿಚ್​ಫೀಲ್ಡ್​ 7, ಗಾರ್ಡ್​ನರ್​ 15, ಬೆಸ್​ 25*, ತನುಜಾ 28, ಅಮೆಲಿಯಾ 14ಕ್ಕೆ 4, ಶಬ್ನಮ್​ 18ಕ್ಕೆ 3). ಮುಂಬೈ ಇಂಡಿಯನ್ಸ್​: 18.1 ಓವರ್​ಗಳಲ್ಲಿ 5 ವಿಕೆಟ್​ಗೆ 129 (ಮ್ಯಾಥ್ಯೂಸ್​ 7, ಯಸ್ತಿಕಾ 7, ಸೀವರ್​ ಬ್ರಂಟ್​ 22, ಹರ್ಮಾನ್​ಪ್ರೀತ್​ 46, ಅಮೆಲಿಯಾ 31, ತನುಜಾ 21ಕ್ಕೆ 2, ಬೆಸ್​ 22 ಕ್ಕೆ 1).