ಬರ್ವಿುಂಗ್ಹ್ಯಾಂ: ವಿಶ್ವ ಚಾಂಪಿಯನ್ ಪಿವಿ ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ನಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಕೂಟದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಆರನೇ ಶ್ರೇಯಾಂಕಿತೆ ಪಿವಿ ಸಿಂಧು ಶುಕ್ರವಾರ ನಡೆದ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಜಪಾನ್ನ ನಜೊಮಿ ಒಕುಹರಾ ವಿರುದ್ಧ 21-12, 15-21, 13-21 ಗೇಮ್ಳಿಂದ ಸೋಲು ಕಂಡರು. ಮೊದಲ ಗೇಮ್ ಗೆದ್ದು ಉತ್ತಮ ಆರಂಭ ಕಂಡಿದ್ದ ಸಿಂಧು, ಮುಂದಿನೆರಡು ಗೇಮ್ಳಲ್ಲಿ ತಿರುಗೇಟು ಎದುರಿಸಿದರು. ಒಟ್ಟಾರೆ 1 ಗಂಟೆ 8 ನಿಮಿಷಗಳ ಹೋರಾಟದಲ್ಲಿ ಸಿಂಧು ಶರಣಾದರು. ಇದರೊಂದಿಗೆ 2001ರ ಬಳಿಕ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಪ್ರಶಸ್ತಿ ಒಲಿಸಿಕೊಳ್ಳುವ ಭಾರತೀಯರ ಆಸೆ ಮತ್ತೆ ಭಗ್ನಗೊಂಡಿದೆ.
ಸಚಿವರ ಸಲಹೆ ಕೇಳಿದ್ದ ಸಿಂಧು!
ಕರೊನಾ ಭೀತಿ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಆಡುವುದನ್ನು ಮುಂದುವರಿಸಬೇಕೇ ಅಥವಾ ತಕ್ಷಣವೇ ತವರಿಗೆ ಮರಳಬೇಕೇ ಎಂದು ಪಿವಿ ಸಿಂಧು ಶುಕ್ರವಾರ ಇಂಗ್ಲೆಂಡ್ನಿಂದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಕರೆ ಮಾಡಿ ಸಲಹೆ ಕೇಳಿದ್ದರು. ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯಲ್ಲಿ ಮುಂದುವರಿಯಿರಿ ಎಂದು ರಿಜಿಜು ಸಲಹೆ ನೀಡಿದ್ದರು ಎನ್ನಲಾಗಿದೆ.