ಕ್ರೀಡೆ

ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಹಣಾಹಣಿ: ಪಿವಿ ಸಿಂಧು, ಸೈನಾ ನೆಹ್ವಾಲ್​ಗೆ ಕಠಿಣ ಸವಾಲು

ಬರ್ವಿುಂಗ್​ಹ್ಯಾಂ: ಕರೊನಾ ಮಹಾಮಾರಿ ಭೀತಿಯ ನಡುವೆಯೂ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ಬುಧವಾರ ಆರಂಭಗೊಳ್ಳಲಿದೆ. ವರ್ಷದ ಮೊದಲ ಸೂಪರ್ 1000 ಟೂರ್ನಿ ಇದಾಗಿದ್ದು, ಒಲಿಂಪಿಕ್ಸ್ ಸಿದ್ಧತೆ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಕರೊನಾ ಭೀತಿಯಿಂದಾಗಿ ಈಗಾಗಲೇ ಹಲವು ಪ್ರತಿಷ್ಠಿತ ಟೂರ್ನಿಗಳು ರದ್ದುಗೊಂಡಿವೆ. ಇದರ ನಡುವೆಯೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ.

ಇಂಗ್ಲೆಂಡ್​ನಲ್ಲೇ ಇದುವರೆಗೂ 300 ಮಂದಿಗೆ ಕರೊನಾ ಸೋಂಕು ಹರಡಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಕರೊನಾ ಭೀತಿಯಿಂದಲೇ ಭಾರತದ ಅಗ್ರಮಾನ್ಯ ಷಟ್ಲರ್​ಗಳಾದ ಎಚ್​ಎಸ್ ಪ್ರಣಯ್, ವಿಶ್ವ ನಂ.10 ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ಸೇರಿದಂತೆ 7 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ಗೆ ಬಹುತೇಕ ಅರ್ಹತೆ ಗಿಟ್ಟಿಸಿಕೊಂಡಿರುವ ವಿಶ್ವ ನಂ.6 ಪಿವಿ ಸಿಂಧು, 2 ದಶಕಗಳಿಂದ ಭಾರತೀಯ ಪಾಲಿಗೆ ಗಗನ ಕುಸುಮವಾಗಿರುವ ಆಲ್ ಇಂಗ್ಲೆಂಡ್ ಚಾಂಪಿಯನ್​ಷಿಪ್ ಜಯಿಸುವ ಉತ್ಸಾಹದಲ್ಲಿದ್ದಾರೆ. ಪಿವಿ ಸಿಂಧು ಜತೆಗೆ ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ಕಣದಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಲು ಏಪ್ರಿಲ್28 ರೊಳಗೆ ಅಗ್ರ 16 ರೊಳಗೆ ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ. 8 ಕೋಟಿ ಬಹುಮಾನ ಮೊತ್ತದ ಟೂರ್ನಿಯ ವಿಜೇತರು 12 ಸಾವಿರ ರ‍್ಯಾಂಕಿಂಗ್ ಪಾಯಿಂಟ್ಸ್ ಸಂಪಾದಿಸಲಿದ್ದಾರೆ. ಜತೆಗೆ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸುವ ಅವಕಾಶವೂ ಹೆಚ್ಚಿರುತ್ತದೆ. ಅರೆನಾ ಬರ್ವಿುಂಗ್​ಹ್ಯಾಂನಲ್ಲಿ ಅಗ್ರ ಶ್ರೇಯಾಂಕಿತ ಷಟ್ಲರ್​ಗಳು ಕಣಕ್ಕಿಳಿಯಲಿದ್ದಾರೆ. 2001ರಲ್ಲಿ ಪಿ.ಗೋಪಿಚಂದ್ ಕಡೇ ಬಾರಿಗೆ ಭಾರತದ ಪರ ಈ ಪ್ರತಿಷ್ಠಿತ ಟೂರ್ನಿ ಜಯಿಸಿದ್ದರು.