ಕ್ರೀಡೆ

VIDEO: ಅಖ್ತರ್ ಕಾಲೆಳೆದ ಐಸಿಸಿ, ಗರಂ ಆದ ರಾವಲ್ಪಿಂಡಿ ಎಕ್ಸ್‌ಪ್ರೆಸ್

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಆಕರ್ಷಕ ಎಸೆತಗಳ ಮೂಲಕ ಮೈದಾನದಲ್ಲಿ ಸಾಕಷ್ಟು ಹೆಸರು ವಾಸಿಯಾಗಿದ್ದರು. ಅದೇ ರೀತಿ ಕೆಲವೊಂದು ವಿವಾದ, ಎದುರಾಳಿ ಆಟಗಾರರನ್ನು ನಿಂದಿಸುವ ಮೂಲಕವೂ ಹೆಸರಾಗಿದ್ದರು. ನಿವೃತ್ತಿ ನಂತರವೂ ಕೆಲವೊಂದು ಹೇಳಿಕೆಗಳ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದೀಗ ಅಖ್ತರ್ ಹೇಳಿಕೆಯನ್ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವ್ಯಂಗ್ಯವಾಗಿ ಟ್ರೋಲ್ ಮಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ. ಐಸಿಸಿ ತನ್ನ ತಟಸ್ಥತೆಯನ್ನು ಕಿಟಕಿಯಿಂದ ಹೊರ ಎಸೆದಿದೆ ಎಂದು 44 ವರ್ಷದ ಅಖ್ತರ್ ಜರಿದಿದ್ದಾರೆ.

ಅಖ್ತರ್ ಹೇಳಿದ್ದೇನು....

ನಾನು ಈಗಲೂ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್‌ರನ್ನು ಬೇಗ ಔಟ್ ಮಾಡಬಲ್ಲೆ.. ಮೂರು ಬೌನ್ಸರ್ ಎಸೆತಗಳ ಬಳಿಕ 4ನೇ ಎಸೆತದಲ್ಲೇ ಸ್ಮಿತ್ ವಿಕೆಟ್ ಪಡೆಯುವೆ ಎಂದು ಪಾಕಿಸ್ತಾನದ ವೇಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ, ಬಾಸ್ಕೆಟ್‌ಬಾಲ್ ಸ್ಟಾರ್ ಆಟಗಾರ ಮೈಕಲ್ ಜೋರ್ಡಾನ್ ಅಖ್ತರ್ ಹೇಳಿಕೆಗೆ ನಗುತ್ತಿರುವಂತೆ ಟ್ರೋಲ್ ಮಾಡಿದೆ. ಜೋರ್ಡಾನ್ ಅವರ ಎರಡು ಚಿತ್ರ ಪ್ರಕಟಿಸಿದ್ದು, ಮೊದಲ ಚಿತ್ರದಲ್ಲಿ ಏನೋ ನೋಡುವಂತಿದ್ದರೆ, ಎರಡನೇ ಚಿತ್ರದಲ್ಲಿ ಅಪಹಾಸ್ಯದ ನಗುವಿದೆ. ಇಂಥ ಕುಚ್ಚೋದ್ಯ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂದು ಅಖ್ತರ್ ಹೇಳಿದ್ದಾರೆ. ಐಸಿಸಿ ತನ್ನ ತಟಸ್ಥ ನಿಲುವು ತಾಳಲು ವಿಲವಾಗಿದೆ ಎಂದು ಹೇಳಿ ತಾವು ಎಸೆದಿರುವ ಆಕರ್ಷಕ ಎಸೆತಗಳು ಇರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಅಖ್ತರ್‌ಗೆ ಬೆಂಬಿಡದ ವಿವಾದಗಳು...

ನಿವೃತ್ತಿ ನಂತರವೂ ರಾವಲ್ಪಿಂಡಿ ಎಕ್ಸ್‌ಪ್ರೆಕ್ಸ್ ಖ್ಯಾತಿಯ ಶೋಯೆಬ್ ಅಖ್ತರ್‌ಗೆ ವಿವಾದಗಳು ಬೆನ್ನು ಬಿಡುತ್ತಿಲ್ಲ. ಯೂಟೂಬ್ ಚಾನೆಲ್, ಸಾಮಾಜಿಕ ಜಾಲಾತಾಣಗಳಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಪಾಕಿಸ್ತಾನದ ಪರ 46 ಟೆಸ್ಟ್, 163 ಏಕದಿನ 15 ಟಿ20 ಪಂದ್ಯಗಳಿಂದ ಕ್ರಮವಾಗಿ 178, 247 ಹಾಗೂ 19 ವಿಕೆಟ್ ಕಬಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಮೂರು ವರ್ಷ ನಿಷೇಧ ವಿಧಿಸಿದ್ದಕ್ಕೆ ಪಿಸಿಬಿ ವಿರುದ್ಧ ಅಖ್ತರ್ ಸಿಟ್ಟಾಗಿದ್ದರು. ಇದರಿಂದ ಪಿಸಿಬಿ ಅಖ್ತರ್‌ಗೆ ನೋಟಿಸ್ ಜಾರಿ ಮಾಡಿ ಮಾನಹಾನಿ ಮೊಕದ್ದಮ್ಮೆ ದಾಖಲಿಸಲಾಗಿತ್ತು. ಪಿಸಿಬಿ ವಕೀಲ ತಾಜುಯಿ ರಿಜ್ವಿ ನೋಟಿಸ್ ನೀಡಿದ್ದರು. ‘ನನಗೆ ರಿಜ್ವಿ ನೀಡಿರುವ ನೋಟಿಸ್ ಬೇಕಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಪ್ರಕರಣದ ವಿರುದ್ಧ ಹೋರಾಟ ಮಾಡುತ್ತೇನೆ’ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.