ಕ್ರೀಡೆ

ಸಿಂಹಕ್ಕೆ ವಯಸ್ಸಾಗಿದೆ ನಿಜ! ಟ್ರೋಫಿ ಗೆಲ್ಲೋದು... 'ಕ್ಯಾಪ್ಟನ್​ ಕೂಲ್'​ ಕುರಿತು ಆಕಾಶ್​ ಚೋಪ್ರಾ ಓಪನ್ ಟಾಕ್​ | MS Dhoni

ಮೋಹನ್​ ಶೆಟ್ಟಿ

MS Dhoni: ನಿನ್ನೆ (ಏ.14) ಏಕಾನ ಕ್ರೀಡಾಂಗಣದಲ್ಲಿ ನಡೆದ ಸಿಎಸ್​ಕೆ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಧೋನಿ ಪಡೆ 5 ವಿಕೆಟ್​ಗಳಿಂದ ರೋಚಕ ಜಯ ಸಾಧಿಸಿತು. ತಂಡದ ಆರಂಭಿಕ ಬ್ಯಾಟರ್​ಗಳು ಅಬ್ಬರಿಸಲು ವಿಫಲರಾದ ಬೆನ್ನಲ್ಲೇ ಕ್ರೀಸ್​ಗೆ ಅಂಟಿ ನಿಂತ ಮಹೇಂದ್ರ ಸಿಂಗ್ ಧೋನಿ, ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು.

ಪಂದ್ಯ ಗೆದ್ದ ನಂತರ ತಂಡದ ಆಟಗಾರರನ್ನು ಹೊಗಳಿದ ಧೋನಿ, ಎದುರಾಳಿ ತಂಡದ ಸದಸ್ಯರ ಪ್ರದರ್ಶನವನ್ನು ಮೆಚ್ಚಿ ಮಾತನಾಡಿದರು. 11 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್​ ಕೂಲ್,​ 27 ರನ್​ ಬಾರಿಸಿ ಅಜೇಯರಾಗಿ ಉಳಿದರು. ಈ ಮಧ್ಯೆ ಐಪಿಎಲ್​ ಇತಿಹಾಸದಲ್ಲಿ 200 ವಿಕೆಟ್​ಗಳನ್ನು ಕಬಳಿಸಿದ ವಿಕೆಟ್​ ಕೀಪರ್​ ಎಂಬ ದಾಖಲೆಗೆ ಸಾಕ್ಷಿಯಾದ ಧೋನಿ, ಈ ಐತಿಹಾಸಿಕ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಒಂದು ಕೈಯಿಂದ ಸಿಕ್ಸ್ ಹೊಡೆದ ಧೋನಿ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ, "ಎಂಎಸ್ ಧೋನಿ ಇಂದಿಗೂ ಪಂದ್ಯಗಳನ್ನು ಗೆಲ್ಲಿಸುತ್ತಿದ್ದಾರೆ. ಸಿಂಹಕ್ಕೆ ವಯಸ್ಸಾಗಿದೆ ನಿಜ. ಆದರೆ, ಎಂದಿನಂತೆ ಬೇಟೆಯಾಡುವುದನ್ನು ಮರೆತಿಲ್ಲ. ಶಾರ್ದೂಲ್ ಠಾಕೂರ್ ಓವರ್​ನಲ್ಲಿ ಒಂದು ಕೈಯಿಂದ ಸಿಕ್ಸ್‌ ಬಾರಿಸಿದ ಧೋನಿ, ಪಂದ್ಯ ಗೆಲ್ಲುವುದಲ್ಲದೇ ಕೊನೆಯವರೆಗೂ ಅಜೇಯರಾಗಿ ಉಳಿದರು. ಇದು ಗಮನಾರ್ಹ" ಎಂದರು.

"ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿಯನ್ನು ಗೆಲ್ಲಲ್ಲಿದೆ ಎಂದು ನಾನು ಹೇಳ್ತಿಲ್ಲ. ಹಾಗೆ ಹೇಳಿದರೆ, ಅದು ಕಾಲ್ಪನಿಕ ಕಥೆಯ ಅಂತ್ಯವಾಗಿರುತ್ತದೆ. ವಾಸ್ತವವಾಗಿ, ಧೋನಿ ಪಂದ್ಯವನ್ನು ಗೆದ್ದಿದ್ದಾರೆ ಮತ್ತು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ನ ಇಲ್ಲಿಯೂ ಪ್ರದರ್ಶಿಸಿದ್ದಾರೆ. ತಮ್ಮ ತಂಡದ ಮಂದಗತಿಯ ಪ್ರದರ್ಶನದ ಬಗ್ಗೆ ಹರಿದುಬಂದ ಟೀಕೆ, ವ್ಯಂಗ್ಯಗಳಿಗೆ ಉತ್ತರಿಸದ ಧೋನಿ, ಗೆಲುವಿನ ಮೂಲಕವೇ ತಕ್ಕ ಉತ್ತರ ನೀಡಿದರು" ಎಂದು ಹೇಳಿದರು,(ಏಜೆನ್ಸೀಸ್).