ಕೊಚ್ಚಿ: ಐಪಿಎಲ್ 16ನೇ ಆವೃತ್ತಿಯ ಪೂರ್ವಭಾವಿಯಾಗಿ ನಡೆದ ಮೊದಲ ದಿನದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯಾ ರಹಾನೆ ಮೂಲ ಬೆಲೆ 50 ಲಕ್ಷ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
2022-23ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಆರಂಭಿಕನಾಗಿ ಅಜಿಂಕ್ಯಾ ರಹಾನೆ ಸದ್ಯ ಆಡುತ್ತಿದ್ದಾರೆ. ಕಳಪೆ ಫಾರ್ಮ್ಸ್ನಿಂದಾಗಿ ರಹಾನೆ ಟೀಂ ಇಂಡಿಯಾದ ಟೆಸ್ಟ್ ತಂಡದಿಂದಲು ಹೊರಗುಳಿದಿದ್ದರು. ರಹಾನೆ ಕಳೆದ ಬಾರಿಯ ಐಪಿಎಲ್ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು.
ರಹಾನೆಯ ಕಳಪೆ ಫಾರ್ಮ್ ಈ ಬಾರಿಗೆ ಐಪಿಎಲ್ ಹರಾಜಿನಲ್ಲಿ ಹಿನ್ನೆಡೆಯಾಗಿದೆ. ಹೀಗಾಗಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರಹಾನೆಯನ್ನು ಖರೀದಿಸಲು ಆರಂಭದಲ್ಲಿ ಯಾವ ಪ್ರಾಂಚೈಸಿಯೂ ಆಸಕ್ತಿ ತೋರಿಸಿರಲಿಲ್ಲ. ಅಂತಿಮವಾಗಿ ಸಿಎಸ್ಕೆ ಮೂಲಬೆಲೆ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಹೀಗಾಗಿ ಈ ಬಾರಿಗೆ ಐಪಿಎಲ್ನಲ್ಲಿ ರಹಾನೆ ಧೋನಿ ತಂಡ ಕೂಡಿಕೊಂಡಿದ್ದಾರೆ.