ಕ್ರೀಡೆ

ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

ನವದೆಹಲಿ: ಮುಂಬರುವ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ರಿಕೆಟ್ ಸರಣಿಯ ಎಲ್ಲ ಪಂದ್ಯಗಳ ವೀಕ್ಷಕವಿವರಣೆ ಆಲ್ ಇಂಡಿಯಾ ರೇಡಿಯೋದಲ್ಲಿ (ಎಐಆರ್) ಪ್ರಸಾರವಾಗಲಿದೆ.

ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ನವೆಂಬರ್ 27ರಿಂದ ನಡೆಯಲಿರುವ ತಲಾ 3 ಏಕದಿನ, ಟಿ20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿಯ ಕಾಮೆಂಟರಿಯನ್ನು ಭಾರತದೆಲ್ಲೆಡೆ ಕೇಳಬಹುದಾಗಿದೆ. ಇನ್ನು ದೂರದರ್ಶನದಲ್ಲಿ ಏಕದಿನ ಮತ್ತು ಟಿ20 ಸರಣಿಯ ಪಂದ್ಯಗಳು ಮಾತ್ರ ನೇರಪ್ರಸಾರ ಕಾಣಲಿವೆ.

‘ನಾವು ಭಾರತ-ಆಸೀಸ್ ಸರಣಿಯ ಎಲ್ಲ ಪಂದ್ಯಗಳ ರೇಡಿಯೋ ಹಕ್ಕು ಪಡೆದುಕೊಂಡಿದ್ದೇವೆ. ಎಐಆರ್‌ನಲ್ಲಿ ಎಲ್ಲ ಪಂದ್ಯಗಳ ವೀಕ್ಷಕವಿವರಣೆ ಕೇಳಬಹುದಾಗಿದೆ. ಇನ್ನು ಡಿಡಿಯಲ್ಲಿ ಸೀಮಿತ ಓವರ್ ಸರಣಿಯ ಪಂದ್ಯಗಳು ಮಾತ್ರ ನೇರಪ್ರಸಾರವಾಗಲಿವೆ’ ಎಂದು ಪ್ರಸಾರ ಭಾರತಿ ಅಧಿಕಾರಿ ತಿಳಿಸಿದ್ದಾರೆ.

ಎಐಆರ್ ಭಾರತದೆಲ್ಲೆಡೆ ಶೇ. 100ರಷ್ಟು ತಲುಪುವಿಕೆ ಹೊಂದಿದೆ. ಕಳೆದ ಐಪಿಎಲ್ ಟೂರ್ನಿ ಪಂದ್ಯಗಳ ಕಾಮೆಂಟರಿ ಪ್ರಸಾರದ ಹಕ್ಕಿಗಾಗಿ ಎಐಆರ್ ಪ್ರಯತ್ನಿಸಿತ್ತು. ಆದರೆ ಬಿಸಿಸಿಐ ಜತೆಗೆ ಒಡಂಬಡಿಕೆ ಸಾಧ್ಯವಾಗದೆ, ಐಪಿಎಲ್ ಪಂದ್ಯಗಳ ವೀಕ್ಷಕವಿವರಣೆಯನ್ನೂ ರೇಡಿಯೋದಲ್ಲಿ ಪ್ರಸಾರ ಮಾಡಲಾಗಿರಲಿಲ್ಲ.