ಕ್ರೀಡೆ

ಇನ್ನು ಮಳೆಗಾಲದ ನಂತರ ಐಪಿಎಲ್!

ನವದೆಹಲಿ: ಸಾಮಾನ್ಯವಾಗಿ ಐಪಿಎಲ್ ಟೂರ್ನಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತದೆ. ಕೆಲವೊಮ್ಮೆ ಮಾರ್ಚ್​ನಲ್ಲೇ ಟೂರ್ನಿ ಆರಂಭ ಗೊಂಡರೂ, ಮೇ ಅಂತ್ಯದೊಳಗೆ ಮುಕ್ತಾಯ ಕಂಡಿರುತ್ತದೆ. ಜೂನ್​ನಿಂದ ಮಳೆಗಾಲ ಆರಂಭವಾಗುವುದು ಇದಕ್ಕೆ ಕಾರಣ. ಆದರೆ ಈ ಬಾರಿ ಕರೊನಾ ವೈರಸ್ ಹಾವಳಿಯಿಂದಾಗಿ 13ನೇ ಆವೃತ್ತಿಯ ಟೂರ್ನಿಯನ್ನು ಮೇ ಅಂತ್ಯದವರೆಗೂ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇನ್ನು ಮಳೆಗಾಲ ಮುಗಿದ ನಂತರವಷ್ಟೇ ಐಪಿಎಲ್ ಟೂರ್ನಿಯನ್ನು ಆಯೋಜಿಸಲಾಗುವುದು ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ತಿಳಿಸಿದ್ದಾರೆ.

ಭಾರತದ ಹೆಚ್ಚಿನ ಭಾಗದಲ್ಲಿ ಜೂನ್​ನಿಂದ ಸೆಪ್ಟೆಂಬರ್​ವರೆಗೂ ಮಳೆಗಾಲ ಇರುತ್ತದೆ. ಇದರಿಂದಾಗಿ ಈ ಸಮಯದಲ್ಲಿ ದೇಶದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಚಟುವಟಿಕೆಗಳು ಕಡಿಮೆ ಇರುತ್ತವೆ. ಟೀಮ್ ಇಂಡಿಯಾ ಕೂಡ ಈ ಸಮಯದಲ್ಲಿ ಹೆಚ್ಚಾಗಿ ವಿದೇಶಿ ಪ್ರವಾಸದಲ್ಲಿ ರುತ್ತದೆ. ಹೀಗಾಗಿ ದೇಶದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್ ಚಟುವಟಿಕೆಗಳು ಶುರುವಾಗಬೇಕಾದರೆ ಮಳೆಗಾಲ ಕಳೆಯಬೇಕು ಎಂದು ಜೋಹ್ರಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಈ ವರ್ಷವೇ ಐಪಿಎಲ್ ಟೂರ್ನಿ ಆಯೋಜನೆಗೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಆಟಗಾರರ ಸುರಕ್ಷತೆಗೆ ಅಗ್ರ ಆದ್ಯತೆ ನೀಡಲಾಗುವುದು ಎಂದು ಆನ್​ಲೈನ್ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿ ರುವ ಜೋಹ್ರಿ, ‘ಸರ್ಕಾರದ ಎಲ್ಲ ಮಾರ್ಗಸೂಚಿ ಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ’ ಎಂದು ಹೇಳಿದ್ದಾರೆ.

ವಿಶ್ವಕಪ್ ಮುಂದೂಡಿದರಷ್ಟೇ ಐಪಿಎಲ್​ಗೆ ಅವಕಾಶ: ಅಕ್ಟೋಬರ್-ನವೆಂಬರ್​ನಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವ ಬಗ್ಗೆ ವಿವಿಧ ವರದಿಗಳು ಬರುತ್ತಿವೆ. ಆದರೆ ಇದು ಸಾಧ್ಯವಾಗಬೇಕಾದರೆ ಅದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡ ಬೇಕಾಗುತ್ತದೆ. ‘ಕರೊನಾ ಭೀತಿಯಿಂದ ಬೇಗನೆ ಮುಕ್ತರಾಗುವ ನಿರೀಕ್ಷೆಯಲ್ಲಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆಗಳನ್ನು ಮಾಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಎಲ್ಲವೂ ಹಂತಹಂತವಾಗಿ ಸುಧಾರಿಸುತ್ತದೆ. ನಾಳೆಯೇ ಸಹಜಸ್ಥಿತಿ ಬರಬೇಕು ಎಂಬುದನ್ನು ನಿರೀಕ್ಷಿಸಲಾಗದು’ ಎಂದು ಜೋಹ್ರಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸದ್ಯಕ್ಕೆ ತೆರವಾಗುವ ಲಕ್ಷಣಗಳಿಲ್ಲದ ಕಾರಣ, ಭಾರತೀಯರನ್ನು ಮಾತ್ರ ಒಳಗೊಂಡ ಐಪಿಎಲ್ ಆಯೋಜನೆಯ ಚಿಂತನೆಯೂ ನಡೆದಿದೆ. ಆದರೆ ಜೋಹ್ರಿ ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ‘ಐಪಿಎಲ್​ನ ವೈಶಿಷ್ಟ್ಯ ಎಂದರೆ, ಇದರಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿರುವ ಅತ್ಯುತ್ತಮ ಕ್ರಿಕೆಟ್ ಆಟಗಾರ ಬಂದು ಆಡಬಹುದು. ಈ ವೈಶಿಷ್ಟ್ಯತೆಯನ್ನು ಹಾಗೆಯೇ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ’ ಎಂದಿದ್ದಾರೆ. -ಏಜೆನ್ಸೀಸ್

ಆಗಸ್ಟ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ

ಪೂರ್ವ ನಿಗದಿಯಂತೆ ಮುಂದಿನ ಆಗಸ್ಟ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಲು ಭಾರತ ಒಪ್ಪಿಗೆ ಸೂಚಿಸಿದೆ. ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್​ಎ) ಸಮ್ಮತಿಸಿದ್ದರೂ, ಕರೊನಾ ಹಾವಳಿಯ ಹಿನ್ನೆಲೆಯಲ್ಲಿ ಉಭಯ ದೇಶಗಳ ಸರ್ಕಾರ ಹಸಿರು ನಿಶಾನೆ ತೋರಿದರಷ್ಟೇ ಸರಣಿ ಆಯೋಜನೆಯಾಗಲಿದೆ. ‘ಹಿಂದಿನ ಒಪ್ಪಂದದ ಪ್ರಕಾರ ಭಾರತ ತಂಡವನ್ನು ದಕ್ಷಿಣ ಆಫ್ರಿಕಾ ಪ್ರವಾಶಕ್ಕೆ ಕಳುಹಿಸಲು ಬಿಸಿಸಿಐ ಒಪ್ಪಿಕೊಂಡಿದೆ. ಒಂದು ವೇಳೆ ಸರಣಿ ಮುಂದೂಡಿಕೆಯಾಗುವುದಿದ್ದರೂ, ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ವನ್ನು ಆಯೋಜಿಸಲು ಕೂಡ ಸಿದ್ಧರಿದ್ದೇವೆ’ ಎಂದು ಸಿಎಸ್​ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕಸ್ ಫೌಲ್ ತಿಳಿಸಿದ್ದಾರೆ.

ಅಂಫಾನ್ ಚಂಡಮಾರುತದಿಂದಾಗಿ ಕೋಲ್ಕತದ ತಮ್ಮ ಮನೆ ಎದುರಿನ ಮಾವಿನ ಮರ ಬಾಗಿ ಹೋಗಿತ್ತು. ಅದನ್ನು ಮತ್ತೆ ಸರಿಯಾಗಿ ನಿಲ್ಲಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷರೂ ಆಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗಿಂತ ಹೆಚ್ಚು ಮಂದಿ ಐಪಿಎಲ್ ಪಂದ್ಯಗಳನ್ನು ನೋಡಿದ್ದರು. ಕ್ರಿಕೆಟ್ ಒಬ್ಬ ನಾಯಕ, ಅದು ಜನರನ್ನು ಮುನ್ನಡೆಸುತ್ತದೆ. ಹೀಗಾಗಿ ಅದರ ಚೇತರಿಕೆ ವಿ-ಶೇಪ್​ಡ್ ರಿಕವರಿಗಿಂತಲೂ ವೇಗವಾಗಿರುತ್ತದೆ.

| ರಾಹುಲ್ ಜೋಹ್ರಿ ಬಿಸಿಸಿಐ ಸಿಇಒ