ಕ್ರೀಡೆ

ಕನ್ನಡ, ಹಿಂದಿ ನಂತರ ತೆಲುಗು, ಮಲಯಾಳಿ, ಬೆಂಗಾಲಿಯಲ್ಲೂ ಬರಲಿದೆ ಆರ್​ಸಿಬಿ!

ಬೆಂಗಳೂರು: ಆರ್​ಸಿಬಿ ತಂಡ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಜತೆಗೆ ಹಿಂದಿಯಲ್ಲೂ ಪೋಸ್ಟ್​ ಮಾಡಲು ಪ್ರತ್ಯೇಕ ಖಾತೆಯನ್ನು ಆರಂಭಿಸಿದ ಬೆನ್ನಲ್ಲೇ ರಾಜ್ಯದ ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ದೇಶದೆಲ್ಲೆಡೆಯ ಅಭಿಮಾನಿಗಳನ್ನು ತಲುಪುವ ಸಲುವಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಆರ್​ಸಿಬಿ, ಮುಂಬರುವ ದಿನಗಳಲ್ಲಿ ಭಾರತದ ಇತರ ಭಾಷೆಗಳಲ್ಲೂ ಖಾತೆ ಆರಂಭಿಸಿ ಪೋಸ್ಟ್​ ಮಾಡುವುದಾಗಿ ತಿಳಿಸಿದೆ.

ಹಾಲಿ ವರ್ಷವೇ ತೆಲುಗು ಖಾತೆಯನ್ನೂ ಆರಂಭಿಸುವುದಾಗಿ ತಿಳಿಸಿರುವ ಆರ್​ಸಿಬಿ, 2026ರಲ್ಲಿ ಮಲಯಾಳಿ, ಪಂಜಾಬಿ ಮತ್ತು ಬೆಂಗಾಲಿ ಭಾಷೆಯಲ್ಲೂ ಖಾತೆ ತೆರೆದು ಪೋಸ್ಟ್​ ಮಾಡುವುದಾಗಿ ಹೇಳಿದೆ. ಈ ಮೂಲಕ ಭಾರತ ಮತ್ತು ವಿಶ್ವದ ಪ್ರತಿ ಮೂಲೆಯಲ್ಲಿರುವ ಅಭಿಮಾನಿಗಳನ್ನು ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದೆ.

ವಿವಿಧ ಭಾರತೀಯ ಭಾಷೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಡಬ್​ ಮಾಡಲಾದ ವಿಡಿಯೋಗಳನ್ನು ಪೋಸ್ಟ್​ ಮಾಡುವುದು ತನ್ನ ಗುರಿಯಾಗಿದೆ ಎಂದು ಆರ್​ಸಿಬಿ ತಿಳಿಸಿದೆ. ಕನ್ನಡ ರಾಜ್ಯೋತ್ಸವದಂದು ಕನ್ನಡ ಖಾತೆಯನ್ನು ಆರಂಭಿಸಿದ್ದ ಆರ್​ಸಿಬಿ ಒಂದು ತಿಂಗಳ ಅವಧಿಯಲ್ಲಿ 1.6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದೆ. ಕನ್ನಡದ ಖಾತೆಗೆ ದೊರೆತ ಪ್ರೋತ್ಸಾಹದ ಬಲದಿಂದಲೇ ಇತರ ಭಾಷೆಗಳಲ್ಲೂ ಖಾತೆಗಳನ್ನು ಆರಂಭಿಸಲು ಮುಂದಾಗಿರುವುದಾಗಿ ಆರ್​ಸಿಬಿ ವಿವರಿಸಿದೆ.