ಚೆನ್ನೈ/ಹೈದರಾಬಾದ್: ಡಿ. ಗುಕೇಶ್ ಅವರದು ಆಂಧ್ರ ಮೂಲದ ತೆಲುಗು ಕುಟುಂಬ ಮತ್ತು ಅವರು ನೆಲೆಸಿರುವುದು ತಮಿಳುನಾಡಿನಲ್ಲಿ. ಅವರ ವಿಶ್ವ ಚಾಂಪಿಯನ್ಷಿಪ್ ಗೆಲುವಿನ ಬೆನ್ನಲ್ಲೇ ತಮಿಳು-ತೆಲುಗು ಭಾಷಿಕರ ನಡುವೆ "ಇವ ನಮ್ಮವ' ಎಂಬ ವಾಕ್ಸಮರ ಶುರುವಾಗಿದೆ. ಚೆನ್ನೈನಲ್ಲಿ ನೆಲೆಸಿ ಚದುರಂಗ ಚಕ್ರವರ್ತಿ ಎನಿಸಿರುವ ಗುಕೇಶ್ಗೆ ತಮಿಳುನಾಡು ಸರ್ಕಾರ ಟೂರ್ನಿಗೆ ಮುನ್ನವೂ ಆರ್ಥಿಕ ನೆರವು ನೀಡಿತ್ತು. ಹೀಗಾಗಿ ಗೆಲುವಿನ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಭಿನಂದಿಸಿದ್ದು, ಇಡೀ ತಮಿಳುನಾಡಿನೆಲ್ಲೆಡೆ ಕೂಡ ಸಂಭ್ರಮಿಸಲಾಗಿದೆ. ಇದರ ನಡುವೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, "ತೆಲುಗು ಹುಡುಗ' ಎಂದು ಸಂಬೋಧಿಸಿ, ಇಡೀ ತೆಲುಗು ಭಾಷಿಕರಿಗೆ ಹೆಮ್ಮೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ತಮಿಳು&ತೆಲುಗು ಭಾಷಿಕರ ನಡುವೆ ಜಟಾಪಟಿ ಜೋರಾಗಿದೆ.
"ಗುಕೇಶ್ ತಮಿಳುನಾಡಿನ ಚೆಸ್ ಸಂಸ್ಕೃತಿ, ಮೂಲಸೌಕರ್ಯಗಳಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರ ಗೆಲುವಿನ ಶ್ರೇಯವನ್ನು ಬೇರಾವುದೇ ರಾಜ್ಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಭಾರತೀಯ. ಆದರೆ ಪೂರ್ವಜರು ಮತ್ತು ಜಾತಿಯ ಆಧಾರದಲ್ಲಿ ಶ್ರೇಯ ಪಡೆದುಕೊಳ್ಳುವುದು ಹಾಸ್ಯಾಸ್ಪದ' ಎಂದು ಚೆಸ್ ಪ್ರೇಮಿಯೊಬ್ಬರು ಬರೆದಿದ್ದಾರೆ.
ದಿಗ್ಗಜ ವಿಶ್ವನಾಥನ್ ಆನಂದ್ ಅವರದೇ ಹಾದಿಯಲ್ಲಿ ಸಾಗಿ ಗುಕೇಶ್ ಈ ಸಾಧನೆ ಮೆರೆದಿದ್ದಾರೆ. ಆನಂದ್ ಅವರಿಂದ ಸ್ಫೂರ್ತಿ ಪಡೆದು ಭಾರತದ ಹಲವು ಆಟಗಾರರು ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ. ಆಂಧ್ರದ ಕೊನೆರು ಹಂಪಿ, ಪಿ. ಹರಿಕೃಷ್ಣ, ದ್ರೋಣವಲ್ಲಿ ಹರಿಕಾ, ವರ್ಷಿಣಿ ಮತ್ತು ಅರ್ಜುನ್ ಇರಿಗೈಸಿ ಕೂಡ ಇದರಲ್ಲಿ ಸೇರಿದ್ದಾರೆ. ಗುಕೇಶ್ ಗೆಲುವು ಕೂಡ ಮುಂದಿನ ಚೆಸ್ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ತುಂಬಲಿದೆ. ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿರುವ ಗುಕೇಶ್ ಸಾಧನೆ ತೆಲುಗು ಭಾಷಿಕರಿಗೆ ಇನ್ನಷ್ಟು ವಿಶೇಷವಾದುದು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.