ಪ್ಯಾರಿಸ್: ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ ಆತಿಥ್ಯದಲ್ಲಿ ಜುಲೈ 26ರಿಂದ ಆರಂಭವಾಗಿರುವ ಒಲಿಂಪಿಕ್ ಕ್ರೀಡಾಕೂಟವು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಒಳ್ಳೆಯ ವಿಚಾರಗಳಿಗಿಂತ ವಿವಾದಗಳಿಂದಲೇ ಸಖತ್ ಸೌಂಡ್ ಮಾಡುತ್ತಿದೆ. ಇದೆಲ್ಲದರ ಜೊತೆಗೆ ಕೆಲವು ಸಿಹಿಯಾದ ಘಟನೆಗಳಿಗೂ ಕ್ರೀಡಾಕೂಟ ಸಾಕ್ಷಿಯಾಗುತ್ತಿದ್ದು, ಇದೀಗ ಚೀನಾದ ಆಟಗಾರ ಚಿನ್ನದ ಪದಕ ಗೆದ್ದ ಖುಷಿಗೆ ತನ್ನ ಸಹ ಆಟಗಾರ್ತಿಗೆ ಪೋಡಿಯಂ ಮೇಲೆಯೇ ಪ್ರಪೋಸ್ ಮಾಡುವ ಎಲ್ಲರ ಗಮನ ಸೆಳೆದಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ನಾವು ನೋಡಿರುವಂತೆ ಯಾವುದಾದರೂ ಕ್ರೀಡಾಕೂಟ ನಡೆಯಬೇಕಾದರೆ ಕೆಲವರು ತಮ್ಮ ಗೆಳತಿಗೆ ಪ್ರೇಕ್ಷಕರ ಗ್ಯಾಲರಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲೆಂದೋ ಅಥವಾ ಇನ್ನಿತ್ತರ ಕಾರಣಗಳಿಗಾಗಿ ಪ್ರೇಮ ನಿವೇದನೆ, ಮದುವೆ ಪ್ರಸ್ತಾಪ ಅಥವಾ ಕ್ಯಾಮರಾ ಮುಂದೆಯೇ ಚುಂಬಿಸುತ್ತಾರೆ, ಅದೇ ರೀತಿ ಇದೀಗ ಚೀನಾದ ಬ್ಯಾಡ್ಮಿಂಟನ್ ಆಟಗಾರ ಕೂಡ ವಿಭಿನ್ನವಾಗಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಆಗಸ್ಟ್ 2 ರಂದು ನಡೆದ ಮಿಶ್ರ ಡಬಲ್ಸ್‌ನಲ್ಲಿ ಚೀನಾದ ಹುವಾಂಗ್ ಯಾ ಕಿಯೊಂಗ್ ಹಾಗೂ ಝೆಂಗ್ ಸಿವೀ ಜೋಡಿ, ದಕ್ಷಿಣ ಕೊರಿಯಾದ ಕಿಮ್ ವಾನ್ ಹೊ ಮತ್ತು ಜಿಯೋಂಗ್ ನಾ ಯುನ್ ಜೋಡಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಈ ಪಂದ್ಯದಲ್ಲಿ ಚೀನಾ ಜೋಡಿ ಪ್ರಾಬಲ್ಯ ಮೆರೆದಿದ್ದು, ದಕ್ಷಿಣ ಕೊರಿಯಾ ಜೋಡಿಯನ್ನು 41 ನಿಮಿಷಗಳಲ್ಲಿ 21-8, 21-11 ಅಂತರದಿಂದ ಸೋಲಿಸಿತು. ಮಿಶ್ರ ಡಬಲ್ಸ್ ಈವೆಂಟ್ ಮುಗಿದ ನಂತರ, ಪದಕ ಪ್ರದಾನ ಸಮಾರಂಭದ ಬಳಿಕ ಈ ಅವಿಸ್ಮರಣೀಯ ಘಟನೆ ನಡೆದಿದೆ.
ಪದಕ ಪ್ರದಾನ ಸಮಾರಂಭದ ಬಳಿಕ ವೇದಿಕೆಯಿಂದ ಹೊರಬಂದ ಹುವಾಂಗ್ ಯಾ ಕಿಯೊಂಗ್ ಅವರಿಗೆ ಚೀನಾದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ತಮ್ಮ ಸಹ ಆಟಗಾರ್ತಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಹುವಾಂಗ್ ಯಾ ಕಿಯೊಂಗ್ ಕೆಲ ಸಮಯ ಆಶ್ಚರ್ಯಚಕಿತರಾದರು. ನಂತರ ಯುಚೆನ್ ಅವರ ಮದುವೆ ಪ್ರಸ್ತಾಪಕ್ಕೆ ಸಮ್ಮತಿಯನ್ನು ಸೂಚಿಸಿದರು. ಇದೇ ವೇಳೆ ಯುಚೆನ್, ಹುವಾಂಗ್ ಅವರಿಗೆ ಉಂಗುರವನ್ನು ತೊಡಿಸಿದರು.
ಈ ಮೊದಲು ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅರ್ಜೆಂಟಿನಾದ ಆಟಗಾರ ಪ್ಯಾಬ್ಲೋ ಸಿಮೊನೆಟ್ ಹಾಕಿ ಆಟಗಾರ್ತಿ ಮಾರಿಯಾ ಕ್ಯಾಂಪೊಯ್ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆಟಗಾರರು 2015 ರಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ಒಲಂಪಿಕ್ ಗೇಮ್ಸ್ ಸ್ವತಃ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಶೇಷ ಕ್ಷಣದ ವೀಡಿಯೊವನ್ನು ಹಂಚಿಕೊಂಡಿತ್ತು.