ಚೆನ್ನೈ: ಟೀಮ್ ಇಂಡಿಯಾ ಬರೋಬ್ಬರಿ 43 ದಿನಗಳ ವಿಶ್ರಾಂತಿಯ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಗುರುವಾರದಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಚೆಪಾಕ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಹಣಾಹಣಿ ನಡೆಯಲಿದೆ. ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದ ಬಳಿಕ ರೋಹಿತ್ ಶರ್ಮ ಬಳಗ ಮುಂದಿನ ಮೂರೂವರೆ ತಿಂಗಳ ಅವಧಿಯಲ್ಲಿ 10 ಟೆಸ್ಟ್ ಆಡುವ ಸವಾಲು ಹೊಂದಿದೆ. ಜತೆಗೆ ಸತತ 3ನೇ ಮೂರನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವುದು ಪ್ರಮುಖ ಗುರಿಯಾಗಿದೆ. ಹೊಸ ಕೋಚ್ ಗೌತಮ್ ಗಂಭೀರ್ಗೆ ಇದು ತವರಿನಲ್ಲಿ ಮೊದಲ ಸವಾಲೆನಿಸಿದೆ.
ಭಾರತ ತಂಡ ಕಳೆದ ದಶಕದಲ್ಲಿ ತವರಿನಲ್ಲಿ ಆಡಿದ 44 ಟೆಸ್ಟ್ಗಳಲ್ಲಿ 40ರಲ್ಲಿ ಗೆದ್ದು, 4ರಲ್ಲಿ ಮಾತ್ರ ಸೋಲುವ ಮೂಲಕ ಪ್ರಾಬಲ್ಯ ಮೆರೆದಿದೆ. ಆಸ್ಟ್ರೆಲಿಯಾ, ಇಂಗ್ಲೆಂಡ್, ದಣ ಆಫ್ರಿಕಾದಂಥ ಬಲಿಷ್ಠ ತಂಡಗಳನ್ನೂ ಹಿಮ್ಮೆಟ್ಟಿಸಿದೆ. ಅಲ್ಲದೆ ಬಾಂಗ್ಲಾ ವಿರುದ್ಧದ ಹಿಂದಿನ ದಾಖಲೆಗಳನ್ನು ಪರಿಗಣಿಸಿದಾಗಲೂ ಭಾರತವೇ ಸರಣಿಯ ಹಾಟ್ ಫೇವರಿಟ್ ತಂಡವಾಗಿದೆ. ಆದರೆ ಬಾಂಗ್ಲಾ ತಂಡ ಇತ್ತೀಚೆಗೆ ಪಾಕಿಸ್ತಾನದಲ್ಲಿ 2-0ಯಿಂದ ಸರಣಿ ಗೆದ್ದ ವಿಶ್ವಾಸದಲ್ಲಿದೆ. ಹೀಗಾಗಿ ಭಾರತ ತಂಡ ಎದುರಾಳಿಯನ್ನು ಲುವಾಗಿ ಪರಿಗಣಿಸದೆ ಎಚ್ಚರಿಕೆಯಿಂದ ಆಡಬೇಕಾಗಿದೆ.
ಭಾರತ ತಂಡ ಬರೋಬ್ಬರಿ 6 ತಿಂಗಳ ಬಳಿಕ ಟೆಸ್ಟ್ ಪಂದ್ಯ ಆಡಲಿದೆ. ಕಳೆದ ಮಾರ್ಚ್ನಲ್ಲಿ ತವರಿನಲ್ಲೇ ಇಂಗ್ಲೆಂಡ್ ವಿರುದ್ಧ ಕೊನೆಯದಾಗಿ ಆಡಿತ್ತು ಮತ್ತು ಬಾಜ್ಬಾಲ್ ಸವಾಲಿನ ಆ ಸರಣಿಯಲ್ಲಿ 4-1ರಿಂದ ಗೆದ್ದು ಬೀಗಿತ್ತು. ನಂತರದಲ್ಲಿ ಐಪಿಎಲ್&ಟಿ20 ವಿಶ್ವಕಪ್ ಸಹಿತ ಭಾರತ ತಂಡದ ಆಟಗಾರರು ಬರೀ ವೈಟ್ ಬಾಲ್ನಲ್ಲೇ ಆಡುತ್ತ ಬಂದಿದ್ದಾರೆ. ಕೆಲ ಆಟಗಾರರು ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಆಡಿದ್ದರೂ, ರೋಹಿತ್, ಕೊಹ್ಲಿ ಸಹಿತ ಪ್ರಮುಖರು ಸುದೀರ್ ಸಮಯದ ಬಳಿಕ ಕೆಂಪು ಬಣ್ಣದ ಚೆಂಡನ್ನು ಎದುರಿಸಲಿದ್ದಾರೆ.
ಸ್ಪಿನ್ ಬೌಲಿಂಗ್ ಸವಾಲು
ಭಾರತ ತಂಡ ಕಳೆದ ತಿಂಗಳು ಪ್ರಮುಖ ಬ್ಯಾಟರ್ಗಳ ಹಾಜರಿಯ ನಡುವೆಯೂ ಶ್ರೀಲಂಕಾದಲ್ಲಿ ಆಡಿದ ಏಕದಿನ ಸರಣಿಯಲ್ಲಿ ಸೋತಿತ್ತು. ಇದಕ್ಕೆ ಕಾರಣ ಲಂಕಾ ಸ್ಪಿನ್ನರ್ಗಳ ಎದುರು ಪರದಾಡಿದ್ದು. ಬಾಂಗ್ಲಾ ಕೂಡ ಎಡಗೈ ಸ್ಪಿನ್ನರ್ಗಳಾದ ಶಕೀಬ್ ಅಲ್ ಹಸನ್, ತೈಜುಲ್ ಇಸ್ಲಾಂ, ಆ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ರಂಥ ಗುಣಮಟ್ಟದ ಸ್ಪಿನ್ನರ್ಗಳನ್ನು ಹೊಂದಿದೆ. ಹೀಗಾಗಿ ಭಾರತೀಯ ಬ್ಯಾಟರ್ಗಳು ಚೆನ್ನೆ$ನಲ್ಲಿ ನಡೆದ ಶಿಬಿರದಲ್ಲಿ ಸ್ಪಿನ್ನರ್ಗಳ ವಿರುದ್ಧವೇ ಹೆಚ್ಚಿನ ಅಭ್ಯಾಸ ನಡೆಸಿದ್ದರು. ರೋಹಿತ್, ಕೊಹ್ಲಿ, ಗಿಲ್, ರಾಹುಲ್, ಜೈಸ್ವಾಲ್, ಪಂತ್ರಂಥ ಪ್ರಮುಖ ಬ್ಯಾಟರ್ಗಳಿರುವ ಭಾರತ ತಂಡಕ್ಕೆ ಬಾಂಗ್ಲಾ ಸ್ಪಿನ್ನರ್ಗಳು ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಬಲ್ಲರು ಎಂಬುದನ್ನು ಕಾದುನೋಡಬೇಕಿದೆ.
ಟೀಮ್ ನ್ಯೂಸ್:
ಭಾರತ: ಸರ್ಫ್ರಾಜ್ ಖಾನ್ರನ್ನು ಹಿಮ್ಮೆಟ್ಟಿಸಿ ಕನ್ನಡಿಗ ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ. ಹೀಗಾಗಿ ಸದ್ಯ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಮಾತ್ರ ಸ್ವಲ್ಪ ಗೊಂದಲ ಉಳಿದಿದೆ. ಚೆನ್ನೈನ ಕೆಂಪು ಮಣ್ಣಿನ ಪಿಚ್ ವೇಗಿಗಳಿಗೆ ನೆರವಾಗುವ ನಿರೀೆಯ ನಡುವೆಯೂ ಭಾರತ ತಂಡ ಇಬ್ಬರು ವೇಗಿಗಳ ಜತೆ ಮೂವರು ಸ್ಪಿನ್ನರ್ಗಳನ್ನು ಆಡಿಸಲು ಬಯಸಿದ್ದು, 3ನೇ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಆಡಬಹುದು. ಸರಣಿಯಲ್ಲಿ ಬುಮ್ರಾ-ಸಿರಾಜ್ಗೆ ಆವರ್ತನದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಚೆನ್ನೆ$ನಲ್ಲಿ ಬುಮ್ರಾ ಜತೆಗೆ ಆಕಾಶ್ದೀಪ್ ಹೊಸ ಚೆಂಡು ಹಂಚಿಕೊಳ್ಳಬಹುದು.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್/ಆಕಾಶ್ದೀಪ್.
ಬಾಂಗ್ಲಾದೇಶ: ಇಬ್ಬರು ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳೊಂದಿಗೆ ಬಾಂಗ್ಲಾ ಕಣಕ್ಕಿಳಿಯಲಿದೆ. ಪಾಕಿಸ್ತಾನದಲ್ಲಿ ಮೂವರು ವೇಗಿಗಳೊಂದಿಗೆ ಆಡಿದ್ದ ಬಾಂಗ್ಲಾ, ಚೆನ್ನೈ ಪಿಚ್ ಸ್ಪಿನ್ ಸ್ನೇಹಿಯಾಗಿರುವುದನ್ನು ಪರಿಗಣಿಸಿ 3ನೇ ಸ್ಪಿನ್ನರ್ ಆಗಿ ತೈಜುಲ್ ಇಸ್ಲಾಂಗೆ ಅವಕಾಶ ಕಲ್ಪಿಸಬಹುದು.
ಸಂಭಾವ್ಯ ತಂಡ: ಶಾದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಾಮಿನುಲ್ ಹಕ್, ಮುಶ್ಫಿಕರ್ ರಹೀಂ, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ವಿ.ಕೀ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಟಸ್ಕಿನ್ ಅಹ್ಮದ್, ನಹಿದ್ ರಾಣಾ.
*ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಮುಖಾಮುಖಿ: 13
ಭಾರತ: 11
ಬಾಂಗ್ಲಾ: 0
ಡ್ರಾ: 2
*ನಮ್ಮ ಬ್ಯಾಟಿಂಗ್ ವಿಭಾಗ ಯಾವುದೇ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಗುಣಮಟ್ಟ ಹೊಂದಿದೆ. ನಾವು ಯಾವುದೇ ಎದುರಾಳಿಯನ್ನು ಲುವಾಗಿ ಪರಿಗಣಿಸುವುದಿಲ್ಲ. ಬಾಂಗ್ಲಾ ತಂಡ ಪಾಕಿಸ್ತಾನದಲ್ಲಿ ಗೆದ್ದಿರುವುದಕ್ಕೆ ಅಭಿನಂದನೆಗಳು. ಆದರೆ ಇದು ಹೊಸ ಸರಣಿ ಮತ್ತು ಅವರಿಗೆ ನಾವು ಹೊಸ ಎದುರಾಳಿ. ಟೆಸ್ಟ್ನಲ್ಲಿ ಎಲ್ಲ 20 ವಿಕೆಟ್ ವಿಕೆಟ್ ಕಬಳಿಸಬಲ್ಲಂಥ ಬೌಲಿಂಗ್ ವಿಭಾಗ ನಮ್ಮ ಬಳಿ ಇದೆ.
| ಗೌತಮ್ ಗಂಭೀರ್, ಟೀಮ್ ಇಂಡಿಯಾ ಕೋಚ್