ಕಾಬೂಲ್: ಕ್ರಿಕೆಟ್ ಪ್ರೇಮಿಗಳ ಸಾಮಾನ್ಯಜ್ಞಾನದ ಪ್ರಕಾರ, ಓವರ್ ಒಂದರಲ್ಲಿ ಬ್ಯಾಟರ್ ಒಬ್ಬ ಹೆಚ್ಚೆಂದರೆ 36 ರನ್ ಸಿಡಿಸಬಹುದು. ಆದರೆ ಅಫ್ಘಾನಿಸ್ತಾನದ ಕಾಬೂಲ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಈ ನಂಬಿಕೆಯನ್ನು ಬ್ಯಾಟರ್ ಸೆದಿಖುಲ್ಲಾ ಅಟಲ್ ಸುಳ್ಳಾಗಿಸಿದ್ದಾರೆ! ಒಂದೇ ಓವರ್ನಲ್ಲಿ 7 ಸಿಕ್ಸರ್ ಸಹಿತ 48 ರನ್ ಕಸಿಯುವ ಮೂಲಕ ಹೊಸ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ಬೌಲರ್ ಆಮಿರ್ ಜಜೈ ಎಸೆದ ಓವರ್ನ ಮೊದಲ ಎಸೆತ ನೋಬಾಲ್ ಆಗಿತ್ತು. ಅದರಲ್ಲಿ ಬ್ಯಾಟರ್ ಸೆದಿಖುಲ್ಲಾ ಅಟಲ್ ಸಿಕ್ಸರ್ ಸಿಡಿಸಿದರು. ನಂತರದ 5 ಎಸೆತಗಳು ವೈಡ್ ಆದವು. ನಂತರ 6 ಕ್ರಮಬದ್ಧ ಎಸೆತಗಳಲ್ಲೂ ಸೆದಿಖುಲ್ಲಾ ಅಟಲ್ ಸತತ 6 ಸಿಕ್ಸರ್ ಸಿಡಿಸಿದರು.
ಶಹೀನ್ ಹಂಟರ್ಸ್ ತಂಡದ ಇನಿಂಗ್ಸ್ನ 19ನೇ ಓವರ್ನಲ್ಲಿ ಈ ದಾಖಲೆಯ ರನ್ ಹರಿದುಬಂತು. ಇದರಿಂದ ಶಹೀನ್ ಹಂಟರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 213 ರನ್ ಪೇರಿಸಿತು. ಪ್ರತಿಯಾಗಿ ಅಬಸಿನ್ ಡಿಫೆಂಡರ್ಸ್ ತಂಡ 18.3 ಓವರ್ಗಳಲ್ಲಿ 121 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು. ಸೆದಿಖುಲ್ಲಾ ಅಟಲ್ 56 ಎಸೆತಗಳಲ್ಲಿ ಅಜೇಯ 118 ರನ್ ಸಿಡಿಸಿದರು. ಇದರಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್ ಸೇರಿತ್ತು. ಎಡಗೈ ಬ್ಯಾಟರ್ ಆಗಿರುವ ಸೆದಿಖುಲ್ಲಾ ಅಟಲ್ ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಪರ ಕಳೆದ ಮಾರ್ಚ್ನಲ್ಲಿ ಏಕೈಕ ಟಿ20 ಪಂದ್ಯ ಆಡಿದ್ದರು.