ಕ್ರೀಡೆ

27ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟವೇರಿದ ಪಂಕಜ್​ ಆಡ್ವಾಣಿ; 3 ದಿನಗಳ ಅಂತರದಲ್ಲಿ 2 ವಿಶ್ವ ಕಿರೀಟ!

ಬೆಂಗಳೂರು: ಭಾರತದ ಅಗ್ರ ಕ್ಯೂ ಆಟಗಾರ ಹಾಗೂ ಕನ್ನಡಿಗ ಪಂಕಜ್​ ಆಡ್ವಾಣಿ ಕೇವಲ 3 ದಿನಗಳ ಅಂತರದಲ್ಲಿ 2ನೇ ವಿಶ್ವ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ 27ನೇ ಬಾರಿ ವಿಶ್ವ ಚಾಂಪಿಯನ್​ ಪಟ್ಟಕ್ಕೇರಿದ ಸಾಧನೆ ಮಾಡಿದ್ದಾರೆ. ದೋಹಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಶ್ವ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​ನ (150-ಅಪ್​) ಅಂಕ ಮಾದರಿಯಲ್ಲಿ ಪಂಕಜ್​ ಪ್ರಶಸ್ತಿ ಜಯಿಸಿದ್ದಾರೆ.

ಮಂಗಳವಾರವಷ್ಟೇ ಅವರು ದೀರ್ಘ ಮಾದರಿಯಲ್ಲೂ ಪ್ರಶಸ್ತಿ ಗೆದ್ದಿದ್ದರು. 38 ವರ್ಷದ ಪಂಕಜ್​ ಫೈನಲ್​ನಲ್ಲಿ ದೇಶಬಾಂಧವ ಸೌರವ್​ ಕೊಠಾರಿ ಎದುರು 5-0 ಅಂತರದಿಂದ ಗೆಲುವು ದಾಖಲಿಸಿದರು. ಭಾರತದ ಇನ್ನಿಬ್ಬರು ಆಟಗಾರರಾದ ಧ್ರುವ ಸಿತ್ವಾಲಾ ಮತ್ತು ಶ್ರೀಕೃಷ್ಣ ಸೂರ್ಯನಾರಾಯಣನ್​ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಪಂಕಜ್​ 27 ವಿಶ್ವ ಪ್ರಶಸ್ತಿಗಳು

*ವಿಶ್ವ ಬಿಲಿಯರ್ಡ್ಸ್​ (ಅಂಕ ಮಾದರಿ): 9 (2005, 2008, 2014, 2016, 2017, 2018, 2019, 2022, 2023)

*ವಿಶ್ವ ಬಿಲಿಯರ್ಡ್ಸ್​ (ದೀರ್ಘ ಮಾದರಿ): 9 (2005, 2007, 2008, 2009, 2012, 2014, 2015, 2018, 2023)

*ವಿಶ್ವ ತಂಡ ಬಿಲಿಯರ್ಡ್ಸ್​ ಚಾಂಪಿಯನ್​ಷಿಪ್​: 1 (2014)

*ವಿಶ್ವ ಸ್ನೂಕರ್​ ಚಾಂಪಿಯನ್​ಷಿಪ್​: 3 (2003, 2015, 2017)

*ವಿಶ್ವ 6-ರೆಡ್​ ಸ್ನೂಕರ್​: 3 (2015, 2014, 2021)

*ವಿಶ್ವ ಸ್ನೂಕರ್​ ತಂಡ ಚಾಂಪಿಯನ್​ಷಿಪ್​: 2 (2018, 2019)