ಕ್ರೀಡೆ

ಗಂಗೂಲಿ ಬರ್ತ್​ಡೇಗೆ ಶುಭ ಹಾರೈಸಿ ಟ್ರೋಲ್​ಗೆ ಒಳಗಾದ ನಟಿ ನಗ್ಮಾ!

ಬೆಂಗಳೂರು: ಬಿಸಿಸಿಐ ಅಧ್ಯಕ್ಷರಾಗಿರುವ ಟೀಮ್​ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಬುಧವಾರ 48ನೇ ಜನ್ಮದಿನ ಆಚರಿಸಿದರು. ಈ ವೇಳೆ ಹಾಲಿ-ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಸುರಿಮಳೆಯೇ ಆಯಿತು. ಇದೇ ವೇಳೆ ನಟಿ ನಗ್ಮಾ ಕೂಡ ಗಂಗೂಲಿ ಶುಭಾಶಯಗಳನ್ನು ತಿಳಿಸಿದರು. ಆದರೆ ಇದರ ಬೆನ್ನಲ್ಲೇ ನೆಟ್ಟಿಗರಿಂದ ಭಾರಿ ಟ್ರೋಲ್​ಗೆ ಒಳಗಾದರು. ಇದಕ್ಕೆ ಕಾರಣವೇನೆಂದು ಗೊತ್ತೇ?

ಗಂಗೂಲಿ ಅವರನ್ನು ಟ್ಯಾಗ್​ ಮಾಡಿ ನಗ್ಮಾ, 'ಹ್ಯಾಪಿ ಬರ್ತ್​ಡೇ' ಎಂದು ಬರೆದುಕೊಂಡಿದ್ದರು. ಇದಕ್ಕೆ ಗಂಗೂಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ನಗ್ಮಾ ಟ್ವೀಟ್​ನಿಂದ ಅಚ್ಚರಿಗೆ ಒಳಗಾದ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಲಾರಂಭಿಸಿದರು. ಈ ಹಿಂದೆ 2001ರಲ್ಲಿ ಗಂಗೂಲಿ ಹೆಸರು ನಟಿ ನಗ್ಮಾ ಜತೆಗೆ ತಳುಕು ಹಾಕಿಕೊಂಡಿದ್ದುದು ಇದಕ್ಕೆ ಕಾರಣ. ಇಬ್ಬರೂ ಜತೆಯಾಗಿ ಸುತ್ತಾಡಿದ್ದರು ಎಂದು ವರದಿಯಾಗಿದ್ದರೂ, ಈ ಬಗ್ಗೆ ಗಂಗೂಲಿ ಎಂದೂ ಏನನ್ನೂ ಹೇಳಿಲ್ಲ. ಆದರೆ ತಮಿಳು, ಕನ್ನಡ ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ, 'ನಮ್ಮಿಬ್ಬರ ಸಂಬಂಧದಿಂದಾಗಿ ಗಂಗೂಲಿ ಅವರ ವೃತ್ತಿಜೀವನವೇ ಅಪಾಯಕ್ಕೆ ಸಿಲುಕಿದ್ದರಿಂದ ಪರಸ್ಪರ ದೂರವಾಗಿದ್ದೆವು' ಎಂದು ಹೇಳಿಕೊಂಡಿದ್ದರು. ಈ ಮೂಲಕ ಗಂಗೂಲಿ ಜತೆಗೆ ತಮಗೆ ಪ್ರೀತಿ ಇದ್ದುದು ನಿಜ ಎಂದು ಒಪ್ಪಿಕೊಂಡಿದ್ದರು.

ಗಂಗೂಲಿ ಪತ್ನಿ ಡೋನಾ ಸಿಟ್ಟಾಗಿದ್ದಾರೆ ಎಂದು ಕೆಲವರು ಟ್ರೋಲ್​ ಮಾಡಿದರೆ, ಮತ್ತೆ ಕೆಲವರು ಗಂಗೂಲಿ ಈಗ ಒಳಗೊಳಗೆ ಖುಷಿ ಪಡುತ್ತಿದ್ದಾರೆ ಎಂಬರ್ಥದ ವಿಡಿಯೋ, ಚಿತ್ರಗಳನ್ನು ಪ್ರಕಟಿಸಿ ಟ್ರೋಲ್​ ಮಾಡಿದ್ದಾರೆ.