ಕ್ರೀಡೆ

ನ್ಯೂಜಿಲೆಂಡ್-ಅಫ್ಘಾನಿಸ್ತಾನ ಪಂದ್ಯಕ್ಕೆ ಮುನ್ನ ಅಬುಧಾಬಿ ಪಿಚ್ ಕ್ಯುರೇಟರ್ ನಿಗೂಢ ಸಾವು

ಅಬುಧಾಬಿ: ನ್ಯೂಜಿಲೆಂಡ್-ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಕೆಲವೇ ಗಂಟೆ ಮುನ್ನ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನ ಮುಖ್ಯ ಪಿಚ್ ಕ್ಯುರೇಟರ್ ಮೋಹನ್ ಸಿಂಗ್ ನಿಗೂಢವಾಗಿ ನಿಧನ ಹೊಂದಿದರು.

ಕಳೆದ ಕೆಲ ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ 45 ವರ್ಷದ ಮೋಹನ್ ಸಿಂಗ್, ಬೆಳಗ್ಗೆ ಪಿಚ್ ಪರಿಶೀಲಿಸಿ ಮರಳಿದ ಬಳಿಕ ತಮ್ಮ ಕೋಣೆಗೆ ಮರಳಿ ನೇಣು ಬಿಗಿದುಕೊಂಡಿದ್ದರು ಎನ್ನಲಾಗಿದೆ. ಭಾರತದ ಉತ್ತರಾಖಂಡದವರಾದ ಮೋಹನ್ ಸಿಂಗ್ 2000ದ ಆರಂಭದಲ್ಲಿ ಯುಎಇಗೆ ವಲಸೆ ಹೋಗಿದ್ದರು. ಅದಕ್ಕೆ ಮುನ್ನ ಮೊಹಾಲಿಯಲ್ಲಿ ಬಿಸಿಸಿಐ ಮಾಜಿ ಮುಖ್ಯ ಕ್ಯುರೇಟರ್ ದಲ್ಜಿತ್ ಸಿಂಗ್ ಗರಡಿಯಲ್ಲಿ ಕೆಲಸ ನಿರ್ವಹಿಸಿದ್ದರು.

ಮೋಹನ್ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅಬುಧಾಬಿ ಕ್ರಿಕೆಟ್ ಸಂಸ್ಥೆ ಮತ್ತು ಐಸಿಸಿ ಸಂತಾಪ ಸೂಚಿಸಿದ್ದರೂ, ಮೋಹನ್ ಸಾವಿಗೆ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ. ‘ಮೋಹನ್ ಸಿಂಗ್ ಪ್ರತಿಭಾನ್ವಿತ ಮತ್ತು ಕಠಿಣ ಪರಿಶ್ರಮಿಯಾಗಿದ್ದರು. ಉತ್ತರಾಖಂಡದ ಗಹ್ವಾಲ್‌ನವರಾದ ಯುಎಇಗೆ ಹೋದ ಬಳಿಕವೂ ಪ್ರತಿ ಬಾರಿ ತವರಿಗೆ ಬಂದಾಗ ನನ್ನನ್ನು ಭೇಟಿಯಾಗುತ್ತಿದ್ದರು. ಆದರೆ ಇತ್ತೀಚೆಗೆ ಅಷ್ಟಾಗಿ ತವರಿಗೆ ಬಂದಿರಲಿಲ್ಲ. ಅವರು ಬಹಳ ಬೇಗನೆ ಹೋದರು. ಇದು ನಿಜಕ್ಕೂ ದುರಂತ’ ಎಂದು ದಲ್ಜಿತ್ ಸಿಂಗ್ ಸಂತಾಪ ಸೂಚಿಸಿದ್ದಾರೆ.