ಕಲ್ಕತ್ತಾ: ಏಪ್ರಿಲ್ 26ರಂದು ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ 42ನೇ ಐಪಿಎಲ್ ಪಂದ್ಯದಲ್ಲಿ ಜಾನಿ ಬೇರ್ಸ್ಟೋ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದು, ಶ್ರೇಯಸ್ ಅಯ್ಯರ್ ಪಡೆಗೆ ತವರಿನಲ್ಲಿ ಮುಖಭಂಗವಾಗಿದೆ. ಇನ್ನು ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಲ್ಕತ್ತಾ ನೈಟ್ರೈಡರ್ಸ್ಗೆ ಆರಂಭಿಕರಾದ ಸುನಿಲ್ ನರೈನ್ (71 ರನ್) ಹಾಗೂ ಫಿಲ್ ಸಾಲ್ಟ್ (75 ರನ್) ಬೃಹತ್ ಮೊತ್ತ ಪೇರಿಸಲು ಭದ್ರ ಬುನಾದಿಯನ್ನು ಹಾಕಿಕೊಟ್ಟು ಔಟಾದರು. ಬಳಿಕ ಬ್ಯಾಟಿಂಗ್ ಮಾಡಲು ಬಂದ ಶ್ರೇಯಸ್ ಅಯ್ಯರ್ 10 ಎಸೆತಗಳಲ್ಲಿ 3 ಸಿಕ್ಸರ್. 1 ಬೌಂಡರಿ ಒಳಗೊಂಡಂತೆ 28 ರನ್ ಸಿಡಿಸಿ ಅರ್ಷ್ದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು.
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಔಟಾದ ವೇಳೆ ತಂಡದ ಸಹ ಮಾಲೀಕ ಶಾರುಖ್ ಖಾನ್ ಅವರ ಪುತ್ರ ಅಬ್ರಾಮ್ ನೀಡಿದ ರಿಯಾಕ್ಷನ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಇದಲ್ಲದೆ ಪಂಜಾಬ್ ಬ್ಯಾಟ್ಸ್ಮನ್ಗಳು ಕಲ್ಕತ್ತಾ ಬೌಲರ್ಗಳನ್ನು ಬೆಂಡೆತ್ತುವಾಗ ಅಬ್ರಾಮ್ ನೀಡಿರುವ ರಿಯಾಕ್ಷನ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶಾರುಖ್ಗಿಂತ ಈತನ ರಿಯಾಕ್ಷನ್ ನೋಡುವುದೆ ಒಂದು ಖುಷಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
17ನೇ ಆವೃತ್ತಿಯ 42ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.