ಕ್ರೀಡೆ

ರೋಹಿತ್ ಹೀಗೆಯೇ ಮುಂದುವರೆದರೆ... ಹಿಟ್​ಮ್ಯಾನ್ ನಿವೃತ್ತಿಯ ಕುರಿತು ಎಬಿಡಿ ಹೇಳಿಕೆ ವೈರಲ್​

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ನಾಯಕ ರೋಹಿತ್ ಶರ್ಮಗೆ ಸಲ್ಲುತ್ತದೆ. 2024ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲೂ ಇದೇ ಸಾಧನೆ ಮಾಡಿದ್ದ ರೋಹಿತ್ ಶರ್ಮ ಮಿನಿ ವಿಶ್ವಕಪ್ ಬಳಿಕ ನಿವೃತ್ತರಾಗಲಿದ್ದಾರೆ ಎಂಬ ಮಾತುಗಳು ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಬಳಿಕ ಈ ಬಗ್ಗೆ ಮಾತನಾಡಿದ್ದ ರೋಹಿತ್ ತಾವು ನಿವೃತ್ತಿಯಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಇದೀಗ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ, ಮಿ.360 ಖ್ಯಾತಿಯ ಎಬಿ ಡಿವಿಲಿಯರ್ಸ್​ (Ab de villiers)​ ರೋಹಿತ್ ಶರ್ಮ ಬೆನ್ನಿಗೆ ನಿಂತಿದ್ದು, ಸಾರ್ವಕಾಲಿಕ ಶ್ರೇಷ್ಠ ಏಕದಿನ ನಾಯಕರಲ್ಲಿ ಒಬ್ಬರೆಂದು ನೆನಪಿಸಿಕೊಳ್ಳಲಾಗುತ್ತದೆ ಎಂದು ಎಂದು ಹೇಳುವ ಮೂಲಕ ಹಿಟ್​ಮ್ಯಾನ್ ಬೆಂಬಲಕ್ಕೆ ನಿಂತಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಕುರಿತಾಗಿ ಮಾತನಾಡಿರುವ ಎಬಿ ಡಿವಿಲಿಯರ್ಸ್​ (Ab de villiers)​, ಬೇರೆ ನಾಯಕರಿಗೆ ಹೋಲಿಸಿ ನೋಡುವುದಾದರೆ ರೋಹಿತ್ ಗೆಲುವಿನ ಶೇಕಡಾವಾರು ಪ್ರಮಾಣವು ಶೇ. 74ರಷ್ಟಿದ್ದು, ಹಿಂದಿನ ನಾಯಕರಿಗೆ ಹೋಲಿಸಿದರೆ ಇದು ಅತ್ಯುತ್ತಮವಾಗಿದೆ. ರೋಹಿತ್ ಹೀಗೆಯೇ ಮುಂದುವರೆದರೆ ಸಾರ್ವಕಾಲಿಕ ಶ್ರೇಷ್ಠ ಏಕದಿನ ನಾಯಕರಲ್ಲಿ ಒಬ್ಬರಾಗಿ ಉಳಿಯುತ್ತಾರೆ.

ಓರ್ವ ನಾಯಕನಾಗಿ ರೋಹಿತ್ ಯಾಕೆ ನಿವೃತ್ತಿಯನ್ನು ಹೊಂದಬೇಕು. ಓರ್ವ ಆಟಗಾರ ಹಾಗೂ ನಾಯಕರಾಗಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಫೈನಲ್‌ನಲ್ಲಿ 76 ರನ್ ಗಳಿಸಿದ್ದಾರೆ. ನಾಯಕರಾಗಿ ಮುಂದೆ ನಿಂತು ಒತ್ತಡವನ್ನು ನಿಭಾಯಿಸಿದ್ದರಲ್ಲದೆ ಭದ್ರ ಅಡಿಪಾಯ ಹಾಕುವ ಮೂಲಕ ತಂಡವನ್ನು ವಿಜಯದತ್ತ ಮುನ್ನಡೆಸಿದ್ದಾರೆ. ನಿವೃತ್ತಿಗೆ ಸಂಬಂಧಿಸಿದಂತೆ ರೋಹಿತ್ ಈಗಾಗಲೇ ಸ್ಪಷ್ಟನೆ ನೀಡಿದ್ದು, ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ.

ಕಳೆದ ಎರಡ್ಮೂರು ವರ್ಷಗಳಿಂದ ರೋಹಿತ್ ತಮ್ಮ ಆಟದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು, ಪವರ್​ಪ್ಲೇನಲ್ಲಿ ತಂಡಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಡುತ್ತಿದ್ದಾರೆ. ಅವರ ಆಟದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅವರ ಹೆಸರಿನಲ್ಲಿರುವ ದಾಖಲೆಗಳೇ ಈ ವಿಚಾರವನ್ನು ಸಾರಿ ಹೇಳುತ್ತದೆ ಎಂದು ಎಬಿ ಡಿವಿಲಿಯರ್ಸ್​ (Ab de villiers)​ ಹೇಳಿದ್ದಾರೆ.