ಕ್ರೀಡೆ

ನನಗೆ ತುಂಬಾ ನೋವಾಯಿತು... ಟೀಮ್​ ಇಂಡಿಯಾವನ್ನು ಟೀಕಿಸಿದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಡಿವಿಲಿಯರ್ಸ್​! AB de Villiers

AB de Villiers : ಏಷ್ಯಾ ಕಪ್-2025ರ ಫೈನಲ್​ ಪಂದ್ಯದ ನಂತರ ಸಾಕಷ್ಟು ಡ್ರಾಮಾ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಗೆಲುವು ಸಾಧಿಸಿದ ಭಾರತೀಯ ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮತ್ತು ಪಾಕಿಸ್ತಾನಿ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಇದರಿಂದ ಅಸಮಾಧಾನಗೊಂಡ ಮೊಹ್ಸಿನ್ ನಖ್ವಿ, ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್‌ಗೆ ತೆಗೆದುಕೊಂಡು ಹೋದರು. ಅವರ ವರ್ತನೆಗೆ ಬಿಸಿಸಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಆದಾಗ್ಯೂ, ಟ್ರೋಫಿ ಇನ್ನೂ ಭಾರತಕ್ಕೆ ತಲುಪಿಲ್ಲ. ಈ ಕುರಿತು ಆರೋಪ-ಪ್ರತ್ಯಾರೋಪಗಳು ನಿತ್ಯವೂ ನಡೆಯುತ್ತಲೇ ಇದೆ.

ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಏಷ್ಯಾ ಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ ಎಂಬ ವರದಿಗಳಿವೆ. ಆದರೆ, ಬಿಸಿಸಿಐನಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇನ್ನು ಟೀಮ್​ ಇಂಡಿಯಾ ಆಟಗಾರರು ಟೂರ್ನಿಯ ಉದ್ದಕ್ಕೂ ಪಾಕಿಸ್ತಾನಿ ಆಟಗಾರರೊಂದಿಗೆ ಯಾವುದೇ ಸಂವಹನ ನಡೆಸಲಿಲ್ಲ. ಪಂದ್ಯದ ಕೊನೆಯಲ್ಲಿ ಶೇಕ್​ಹ್ಯಾಂಡ್​ ಕೂಡ ನೀಡಲಿಲ್ಲ. ಇದು ಕೂಡ ಭಾರಿ ವಿವಾದವಾಯಿತು.

ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಬೆಳವಣಿಗೆಗಳ ಬಗ್ಗೆ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ ಭಾರತೀಯ ತಂಡದ ಮನೋಭಾವವನ್ನು ಡಿವಿಲಿಯರ್ಸ್ ಟೀಕಿಸಿದ್ದಾರೆ. ಕ್ರೀಡೆಯಿಂದ ರಾಜಕೀಯವನ್ನು ದೂರವಿಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಎಸಿಸಿ ಅಧ್ಯಕ್ಷರ ಕೈಯಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಟೀಮ್ ಇಂಡಿಯಾ ಒಪ್ಪಲಿಲ್ಲ. ಅದಕ್ಕೆ ಕಾರಣ ನಮಗೆಲ್ಲರಿಗೂ ತಿಳಿದಿದೆ. ಆದರೆ ಅದು ಕ್ರೀಡೆಗೆ ಸಂಬಂಧಿಸಿಲ್ಲ. ರಾಜಕೀಯವನ್ನು ಕ್ರೀಡೆಯಿಂದ ದೂರವಿಡಬೇಕು. ನಾವು ಕ್ರೀಡೆಯನ್ನು ಪ್ರತ್ಯೇಕವಾಗಿ ನೋಡಬೇಕು. ಅದನ್ನು ರಾಜಕೀಯಕ್ಕೆ ಲಿಂಕ್ ಮಾಡಬಾರದು. ಏಷ್ಯಾ ಕಪ್‌ನಲ್ಲಿ ನಡೆದ ಬೆಳವಣಿಗೆಗಳು ನನಗೆ ತುಂಬಾ ನೋವನ್ನುಂಟುಮಾಡಿವೆ. ಆದರೆ, ಭವಿಷ್ಯದಲ್ಲಿ ಈ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಾನು ಭಾವಿಸುತ್ತೇನೆ. ಇಂತಹ ಘಟನೆಗಳು ಆಟಗಾರರನ್ನು ಮಾನಸಿಕವಾಗಿ ಹಾನಿಗೊಳಿಸುತ್ತವೆ. ನನಗೆ ಅಂತಹ ವಿಷಯಗಳು ಇಷ್ಟವಿಲ್ಲ. ಕೊನೆಯಲ್ಲಿ, ಏಷ್ಯಾ ಕಪ್ ವಿವಾದಗಳೊಂದಿಗೆ ಕೊನೆಗೊಂಡಿತು ಎಂದು ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಅದೇ ರೀತಿ, ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಡಿವಿಲಿಯರ್ಸ್​, ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತೀಯ ತಂಡದ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಟೀಮ್ ಇಂಡಿಯಾ ತುಂಬಾ ಚೆನ್ನಾಗಿ ಕಾಣುತ್ತಿದೆ ಮತ್ತು ಟಿ20 ವಿಶ್ವಕಪ್-2026ಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)