ಕ್ರೀಡೆ

3ನೇ ಮಗುವಿನ ನಿರೀಕ್ಷೆಯಲ್ಲಿ ಎಬಿ ಡಿವಿಲಿಯರ್ಸ್​ ದಂಪತಿ

ಜೊಹಾನ್ಸ್​ಬರ್ಗ್​​: ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್​ 3ನೇ ಬಾರಿ ತಂದೆಯಾಗಿದ್ದಾರೆ. 36 ವರ್ಷದ ಆಟಗಾರ ಡಿವಿಲಿಯರ್ಸ್​ ಅವರ ಪತ್ನಿ ಡೇನಿಯಲ್​ ಡಿವಿಲಿಯರ್ಸ್​ 3ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಪುತ್ರರನ್ನು ಹೊಂದಿರುವ ಡಿವಿಲಿಯರ್ಸ್​ ದಂಪತಿ ಈ ಬಾರಿ ಹೆಣ್ಣು ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. 'ಹಲೋ ಬೇಬಿ ಗರ್ಲ್​' ಎಂದು ಡೇನಿಯಲ್​ ಡಿವಿಲಿಯರ್ಸ್​ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ದೀರ್ಘಕಾಲದ ಗೆಳತಿ ಡೇನಿಯಲ್​ ಅವರಿಗೆ 2012ರಲ್ಲಿ ಆಗ್ರಾದ ಪ್ರೇಮಸೌಧ ತಾಜ್​ಮಹಲ್​ ಎದುರು ಪ್ರೇಮ ನಿವೇದನೆ ಮಾಡಿದ್ದ ಡಿವಿಲಿಯರ್ಸ್​, 2013ರ ಮಾರ್ಚ್​ನಲ್ಲಿ ವಿವಾಹವಾಗಿದ್ದರು. ದಂಪತಿಗೆ 2015ರಲ್ಲಿ ಮೊದಲ ಮತ್ತು 2017ರಲ್ಲಿ 2ನೇ ಪುತ್ರ ಜನಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದ ಎಬಿ ಡಿವಿಲಿಯರ್ಸ್​, ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದು ಉತ್ತಮ ನಿರ್ವಹಣೆ ತೋರಿದರೆ, ಟಿ20 ವಿಶ್ವಕಪ್​ನಲ್ಲಿ ಮತ್ತೆ ದಕ್ಷಿಣ ಆಫ್ರಿಕಾ ಪರ ಆಡುವ ಯೋಜನೆಯಲ್ಲಿದ್ದರು. ಆದರೆ ಐಪಿಎಲ್​ ಅನಿದಿರ್ಷ್ಟಾವಧಿಗೆ ಮುಂದೂಡಲ್ಪಟ್ಟರೆ, ಟಿ20 ವಿಶ್ವಕಪ್​ ಅನಿಶ್ಚಿತತೆಯಲ್ಲಿದೆ. ಈ ನಡುವೆ ಜುಲೈ 18ರಂದು ಅವರು ದಕ್ಷಿಣ ಆಫ್ರಿಕಾದ ವಿನೂತನ 3ಟಿ ಕ್ರಿಕೆಟ್​ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ಶುಭಾಶಯ ಸಲ್ಲಿಸಿದ ಅನುಷ್ಕಾ ಶರ್ಮ

ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಡೇನಿಯಲ್​ ಡಿವಿಲಿಯರ್ಸ್​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆನ್ನಲ್ಲೇ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಶುಭಾಶಯ ತಿಳಿಸಿದ್ದಾರೆ. ಅಭಿನಂದನೆಗಳು ಡೇನಿಯಲ್​ ಮತ್ತು ಎಬಿ, 'ಎಂಥಾ ಶುಭ ಸುದ್ದಿ ನೀಡಿದ್ದೀರಿ' ಎಂದು ಅನುಷ್ಕಾ ಕಮೆಂಟ್​ ಹಾಕಿದ್ದಾರೆ. ಅನುಷ್ಕಾ ಶರ್ಮ ಅವರ ಪತಿ ಹಾಗೂ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ಎಬಿಡಿ ಆರ್​ಸಿಬಿಯಲ್ಲಿ ಸಹ-ಆಟಗಾರರಾಗಿದ್ದು, ಉತ್ತಮ ಸ್ನೇಹ ಹೊಂದಿದ್ದಾರೆ. ಎಬಿಡಿ ದಣ ಆಫ್ರಿಕಾ ಪರ 114 ಟೆಸ್ಟ್​, 228 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆರ್​ಸಿಬಿ ಪರ ಆಡುವ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಮೈದಾನದ ಮೂಲೆಮೂಲೆಗೆ ಚೆಂಡು ಅಟ್ಟುವ ಸಾಮರ್ಥ್ಯದಿಂದಾಗಿ ಅವರು 'ಮಿಸ್ಟರ್​ 360' ಬ್ಯಾಟ್ಸ್​ಮನ್​ ಎಂದೂ ಅವರು ಜನಪ್ರಿಯರು.