ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಟೀಮ್ ಇಂಡಿಯಾ ಇಂದು (ಜೂನ್ 12) ಯುಎಸ್ಎ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಪಂದ್ಯವು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ರೋಹಿತ್ ಪಡೆ ಈಗಾಗಲೇ ಎರಡು ಪಂದ್ಯಗಳನ್ನಾಡಿರುವುದು ಗೊತ್ತೇ ಇದೆ. ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ರೋಹಿತ್ ಪಡೆ ಗೆಲುವು ಸಾಧಿಸಿದೆ. ಆದರೆ, ಈ ಪಿಚ್ನಲ್ಲಿ ರನ್ ಗಳಿಸಲು ಬ್ಯಾಟ್ಸ್ಮನ್ಗಳಿಗೆ ತೊಂದರೆಯಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಮತ್ತೊಂದೆಡೆ, ಯುಎಸ್ಎ ತಂಡವು ಎರಡು ಪಂದ್ಯಗಳನ್ನು ಗೆದ್ದಿದೆ. ಕೆನಡಾ ಮತ್ತು ಪಾಕಿಸ್ತಾನ ತಂಡಗಳನ್ನು ಸೋಲಿಸಿ ಇದೀಗ ಭಾರತಕ್ಕೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ.
ಭಾರತ vs ಯುಎಸ್ಎ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಆದರೆ ಪಂದ್ಯಕ್ಕೂ ಮುನ್ನ ಅಮೆರಿಕ ಓಪನರ್ ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಮೆರಿಕದ ಓಪನರ್ ಆ್ಯರೋನ್ ಜೋನ್ಸ್ ಮಾತನಾಡಿದ್ದು, ಖಂಡಿತವಾಗಿಯೂ ನಾವು ಭಾರತಕ್ಕೆ ಕಠಿಣ ಸವಾಲಾಗುತ್ತೇವೆ. ನಾವು ಪ್ರತಿ ಪಂದ್ಯವನ್ನು ಪರಿಶ್ರಮದಿಂದ ಆಡಲು ಮತ್ತು ನಿರ್ಭೀತ ಕ್ರಿಕೆಟ್ ಆಡಲು ಬಯಸುತ್ತೇವೆ. ಗೆದ್ದು ಮೇಲಕ್ಕೇರಲು ಬಯಸುತ್ತೇವೆ. ಚೆನ್ನಾಗಿ ತರಬೇತಿ ಪಡೆದುಕೊಂಡಿದ್ದೇವೆ. ಕಳೆದ ಎರಡು ವಾರಗಳಿಂದ ನಾವು ಒಂದು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ ಮತ್ತು ಅದನ್ನೇ ಭಾರತದ ವಿರುದ್ಧವೂ ಮುಂದುವರಿಸುತ್ತೇವೆ. ನಾವು ಯಾರ ವಿರುದ್ಧ ಆಡಿದರೂ ನಿರ್ಭೀತ ಕ್ರಿಕೆಟ್ ಆಡಲು ಬಯಸುತ್ತೇವೆ ಎಂದು ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡಿದರು.
ಟೀಮ್ ಇಂಡಿಯಾದಲ್ಲಿ ಯಾವ ಆಟಗಾರ ಅಮೆರಿಕ ತಂಡವನ್ನು ಕಾಡಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಆ್ಯರನ್ ಜೋನ್ಸ್, ನಾವು ಅದರ ಬಗ್ಗೆ ಯೋಚಿಸುತ್ತಿಲ್ಲ. ಆದರೆ, ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸುವುದನ್ನು ನಾವು ಸವಾಲಾಗಿ ಪರಿಗಣಿಸುತ್ತೇವೆ ಎಂದು ಜೋನ್ಸ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ನೇರವಾಗಿ ಸೂಪರ್ 8ಕ್ಕೆ ಅರ್ಹತೆ ಪಡೆಯಲಿದೆ. ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ ಸೂಪರ್ 8ಕ್ಕೆ ಹೋಗಲಿದೆ. ಯುಎಸ್ಎ ಗೆದ್ದರು ಕೂಡ ಸೂಪರ್ 8ರ ಘಟ್ಟ ಪ್ರವೇಶ ಮಾಡಲಿದೆ. ಇಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಪಾಕಿಸ್ತಾನಕ್ಕೆ ಮುಖ್ಯವಾಗಿದೆ. ಪಾಕಿಸ್ತಾನ ತಂಡ ಭಾರತ ಗೆಲ್ಲಬೇಕು ಎಂದು ಬಯಸಿದೆ. ಏಕೆಂದರೆ, ಭಾರತ ಗೆದ್ದರೆ ಪಾಕಿಸ್ತಾನದ ಸೂಪರ್ 8ರ ಆಸೆ ಜೀವಂತವಾಗಿ ಇರಲಿದೆ. (ಏಜೆನ್ಸೀಸ್)