ಕ್ರೀಡೆ

ಅದನ್ನು ನೋಡಿದಾಗ ಅವರ ಹುಡುಗಿ ಕೈಕೊಟ್ಟು ಹೋದಂತಿತ್ತು! ಮಾಜಿ ಹಿರಿಯ ಕ್ರಿಕೆಟಿಗ ವ್ಯಂಗ್ಯ | Aakash Chopra

ನವದೆಹಲಿ: ಎರಡು ದಿನಗಳ ಕಾಲ ನಡೆದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತನ್ನ ತೆಕ್ಕೆಗೆ ಯುವ ಮತ್ತು ಸ್ಟಾರ್ ಆಲ್​ರೌಂಡ್ ಆಟಗಾರರನ್ನು ಅತಿ ಕಡಿಮೆ ಬಜೆಟ್​ನಲ್ಲಿ ಖರೀದಿ ಮಾಡಿ, ಇತರೆ ಫ್ರಾಂಚೈಸಿಗಳಲ್ಲಿ ಹುಬ್ಬೇರಿಸಿತು. ಒಂದೆಡೆ ಇದು ಕ್ರಿಕೆಟ್ ಪ್ರಿಯರ ಖುಷಿಗೆ ಕಾರಣವಾದರೆ, ಮತ್ತೊಂದೆಡೆ, ತಮ್ಮ ತಂಡದ ವೇಗಿ ದೀಪಕ್​ ಚಹರ್​ರನ್ನು ಉಳಿಸಿಕೊಳ್ಳದೆ ಹೋಗಿದ್ದು, ಹಲವರಿಗೆ ತೀವ್ರ ಬೇಸರ ಮೂಡಿಸಿತು. ಸದ್ಯ ಈ ವಿಷಯವನ್ನು ಮುಂದಿಟ್ಟು ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್​ ಚೋಪ್ರಾ (Aakash Chopra ), ಇದೊಂದು ರೀತಿ ಅವರ ಹುಡುಗಿ ಯಾರೊಂದಿಗೋ ಓಡಿ ಹೋದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ದೀಪಕ್​ ಚಹಾರ್​ರನ್ನು 2025ರ ಐಪಿಎಲ್​ ಬಿಡ್ಡಿಂಗ್​ನಲ್ಲಿ ಉಳಿಸಿಕೊಳ್ಳಲು ವಿಫಲರಾದಾಗ ಸಿಎಸ್​ಕೆ ಕೋಚ್​ ಸ್ಟೀಫನ್​ ಫ್ಲೇಮಿಂಗ್​ ಕೊಟ್ಟ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಮಾತನಾಡಿದ ಆಕಾಶ್​ ಚೋಪ್ರಾ, "ಇಡೀ ಹರಾಜು ಪ್ರಕ್ರಿಯೆಯಲ್ಲಿ ದೀಪಕ್​ರನ್ನು ಖರೀದಿ ಮಾಡುವಲ್ಲಿ ಮಾತ್ರ ಸಿಎಸ್​ಕೆ ವಿಫಲವಾಯಿತು. ಉಳಿದೆಲ್ಲಾ ಖರೀದಿ ಕೂಡ ಅದ್ಭುತವಾಗಿದೆ. ವೇಗಿಯನ್ನು ರಿಟೇನ್ ಮಾಡಿಕೊಳ್ಳಲು ಐದು ಫ್ರಾಂಚೈಸಿಗಳು ಹಿಂದೇಟು ಹಾಕಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ 9.25 ಕೋಟಿ ರೂ. ಕೊಟ್ಟು, ಚಹರ್​ರನ್ನು ತಮ್ಮ ತಂಡಕ್ಕೆ ಖರೀದಿಸಿತು" ಎಂದರು.

"ಸ್ಯಾಮ್​ ಕರನ್​ ಸೇರಿದಂತೆ ಕೆಲವು ಆಟಗಾರರನ್ನು ಖುಷಿ ಖುಷಿಯಿಂದಲೇ ಖರೀದಿಸಿದ ಸ್ಟೀಫನ್ ಫ್ಲೇಮಿಂಗ್​, ದೀಪಕ್​ ಚಹಾರ್​ ವಿಚಾರದಲ್ಲಿ ಮಾತ್ರ ಕಣ್ಣೀರಾಕುವಂತೆ ಮುಖ ಮಾಡಿದ್ದರು. ಇದನ್ನು ನೋಡಿದಾಗ ನನಗನಿಸಿದ್ದು, ಅವರ ಪಾಡು ಒಂದು ರೀತಿ ಇಷ್ಟು ವರ್ಷಗಳ ಕಾಲ ಜತೆಗಿದ್ದ ತನ್ನ ಹುಡುಗಿ ಈಗ ಯಾರೊಂದಿಗೋ ಓಡಿ ಹೋದಂತೆ ಇತ್ತು. ಅಸಲಿಗೆ ಈ ಹಿಂದೆ ಚಹರ್​ ತಮ್ಮ ತಂಡದಲ್ಲಿದ್ದಾಗ ಹೇಗಿತ್ತೋ. ಅದೇ ತಂಡ ಅವರಿಗೆ ಬೇಕಿತ್ತು ಎಂಬುದು ಅಲ್ಲಿ ಕಾಣಿಸಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).