ನವದೆಹಲಿ: ಸನ್ರೈಸರ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಜವಾಬ್ದಾರಿಯನ್ನೂ ನೀಡದಿದ್ದರೆ 20.50 ಕೋಟಿ ರೂ. ನೀಡಿರುವುದು ವ್ಯರ್ಥವಾಗಲಿದೆ ಎಂದಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, ಸ್ಟಾರ್ಕ್ ಐಪಿಎಲ್ನಲ್ಲಿ ಎಲ್ಲ 14 ಪಂದ್ಯ ಆಡಿ 4 ಓವರ್ಗಳ ಕೋಟಾ ಪೂರ್ಣಗೊಳಿಸಿದರೂ, ಪ್ರತಿ ಎಸೆತಕ್ಕೆ 7.60 ಲಕ್ಷ ರೂ. ನೀಡಿದಂತಾಗುತ್ತದೆ. ಆದರೆ ಅವರೇನು ಐಪಿಎಲ್ನ ಬೆಸ್ಟ್ ಬೌಲರ್ ಅಲ್ಲ. ಆ ಗೌರವ ಹೊಂದಿರುವ ಜಸ್ಪ್ರೀತ್ ಬುಮ್ರಾ ಪಡೆಯುವುದು 12 ಕೋಟಿ ರೂ. ಮಾತ್ರ ಎಂದಿದ್ದಾರೆ.
ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಆಸ್ಟ್ರೆಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಮತ್ತು ಪ್ಯಾಟ್ ಕಮ್ಮಿನ್ಸ್ಗೆ (20.50 ಕೋಟಿ ರೂ.) ಒಟ್ಟಾರೆ 45.25 ಕೋಟಿ ರೂ. ಬಿಡ್ ಸಲ್ಲಿಸಿದ ನಡೆಯನ್ನು ಆಕಾಶ್ ಚೋಪ್ರಾ ಟೀಕಿಸಿದ್ದಾರೆ. ಈ ಇಬ್ಬರು ವಿದೇಶಿ ಆಟಗಾರರಿಗೆ ಅರ್ಹತೆಗಿಂತ ಅಧಿಕ ಮೊತ್ತವನ್ನು ನೀಡಲಾಗುತ್ತಿದೆ ಎಂದಿರುವ ಅವರು, ಈ ಲೆಕ್ಕಾಚಾರದ ಪ್ರಕಾರ ಭಾರತದ ಕ್ರಿಕೆಟ್ ತಾರೆಯರಾದ ವಿರಾಟ್ ಕೊಹ್ಲಿ ಒಂದು ವೇಳೆ ಈಗ ಹರಾಜಿಗೆ ಹೋದರೆ 42 ಕೋಟಿ ರೂ. ವರೆಗೂ ಮೌಲ್ಯ ಪಡೆದುಕೊಳ್ಳಬಹುದು. ವೇಗಿ ಜಸ್ಪ್ರೀತ್ ಬುಮ್ರಾಗೆ 35 ಕೋಟಿ ರೂ.ವರೆಗೂ ಬಿಡ್ ಸಲ್ಲಿಕೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಹರಾಜು ಇತಿಹಾಸದ ಇದುವರೆಗಿನ ಅಗ್ರ 10 ದುಬಾರಿ ಆಟಗಾರರ ಪಟ್ಟಿ ತೆಗೆದರೆ ಇದರಲ್ಲಿ 8 ವಿದೇಶಿ ಆಟಗಾರರೇ ಕಾಣಿಸಿಕೊಳ್ಳುತ್ತಾರೆ. ಯುವರಾಜ್ ಸಿಂಗ್ ಮತ್ತು ಇಶಾನ್ ಕಿಶನ್ ಮಾತ್ರ ಭಾರತೀಯರಾಗಿರುತ್ತಾರೆ.
"ಇದು ಇಂಡಿಯನ್ ಪ್ರೀಮಿಯರ್ ಲೀಗ್. ಇದರಲ್ಲಿ ಭಾರತೀಯರಿಗೆ ಕಡಿಮೆ ಸಂಭಾವನೆ ಸಿಗುವುದು ಸರಿಯಲ್ಲ. ಆಟಗಾರರ ತಂಡ ನಿಷ್ಠೆಗೂ ಗೌರವ ಕೊಡಬೇಕಾಗುತ್ತದೆ. ನಾಳೆ ಕೊಹ್ಲಿ ಕೂಡ ಆರ್ಸಿಬಿ ತ್ಯಜಿಸಿ ಹರಾಜಿಗೆ ಬಂದರೆ 42 ಕೋಟಿ ರೂ. ಮತ್ತು ಬುಮ್ರಾ ಮುಂಬೈ ಬಿಟ್ಟುಬಂದರೆ 35 ಕೋಟಿ ರೂ. ಪಡೆಯಬಹುದು. ಆದರೆ ಹಾಗಾಗುತ್ತಿಲ್ಲ. ಹೀಗಾಗಿ ವ್ಯವಸ್ಥೆಯಲ್ಲೇ ಏನೋ ಲೋಪವಿದೆ' ಎಂದು ಆಕಾಶ್ ಚೋಪ್ರಾ ತನ್ನ ಯುಟ್ಯೂಬ್ ಚಾನಲ್ನಲ್ಲಿ ವಿವರಿಸಿದ್ದಾರೆ.
ಐಪಿಎಲ್ನಲ್ಲಿ ಭಾರತೀಯರಿಗೆ ಹೆಚ್ಚಿನ ಮನ್ನಣೆ ಸಿಗುವಂತಾಗಲು ವಿದೇಶಿ ಆಟಗಾರರ ಸಂಭಾವನೆಗೆ ಮಿತಿ ಹಾಕಬೇಕು. ತಂಡದ ಒಟ್ಟು ಬಜೆಟ್ 2 ಕೋಟಿ ರೂ. ಆಗಿದ್ದರೆ, ಅದರಲ್ಲಿ 1.5 ಅಥವಾ 1.75 ಕೋಟಿ ರೂ. ಭಾರತೀಯರಿಗೆ ಮೀಸಲಾಗಿರಬೇಕು. ಆಗ ಮಾತ್ರ ಭಾರತೀಯರಿಗೆ ನ್ಯಾಯ ಸಲ್ಲಿಸಲು ಸಾಧ್ಯ ಎಂದೂ ಹೇಳಿದ್ದಾರೆ.